ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.19 : ಸಾಹಸ ಸಿಂಹ ಡಾ.ವಿಷ್ಣುವರ್ಧನ್‍ರವರ 73 ನೇ ಜನ್ಮದಿನವನ್ನು ತುರುವನೂರು ರಸ್ತೆಯಲ್ಲಿರುವ ಉದ್ಯಾನವನದಲ್ಲಿ ಡಾ.ವಿಷ್ಣುವರ್ಧನ್ ಆದರ್ಶ ಬಳಗದಿಂದ ಸೋಮವಾರ ಆಚರಿಸಲಾಯಿತು.
ಡಾ.ವಿಷ್ಣುವರ್ಧನ್‍ರವರ ಆದರ್ಶ ಬಳಗದ ಅಧ್ಯಕ್ಷ ಸಿ.ಕೆ.ಗೌಸ್‍ಪೀರ್ ಕೇಕ್ ಕತ್ತರಿಸಿ ಮಾತನಾಡುತ್ತ ನಾಗರಹಾವು ಚಿತ್ರದ ಮೂಲಕ ವಿಷ್ಣುವರ್ಧನ್ ಪಾದಾರ್ಪಣೆ ಮಾಡಿದ ಊರು ಚಿತ್ರದುರ್ಗ.
ಡಾ.ವಿಷ್ಣುವರ್ಧನ್‍ರವರ ಹೆಸರಿನಲ್ಲಿ ನಿರ್ಮಾಣವಾಗಿರುವ ಉದ್ಯಾನವನದ ಅಭಿವೃದ್ದಿಗೆ ಕಳೆದ ವರ್ಷ 40 ಲಕ್ಷ ರೂ. ಬಿಡುಗಡೆಯಾಗಿದೆ. ಆದರೆ ಅಭಿವೃದ್ದಿ ಮಾತ್ರ ಶೂನ್ಯ, ನಗರಸಭೆಯವರನ್ನು ಕೇಳಿದರೆ ನಗರಾಭಿವೃದ್ದಿ ಕಡೆ ಕೈತೋರಿಸುತ್ತಾರೆ.
ನಗರಾಭಿವೃದ್ದಿಯನ್ನು ಕೇಳಿದರೆ ನಗರಸಭೆ ಕಡೆ ಬೆರಳು ತೋರಿಸಿ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ. ಪಾರ್ಕಿನ ಸುತ್ತ ಗ್ರಿಲ್‍ಗಳನ್ನು ಅಳವಡಿಸಿರುವುದನ್ನು ಬಿಟ್ಟರೆ ಹೈಮಾಸ್ ದೀಪ ಇನ್ನು ಉರಿಯುತ್ತಿಲ್ಲ. ಮಳೆ ಬಂದರೆ ನೀರು ನಿಂತು ಕೆಸರುಮಯವಾಗುತ್ತದೆ ಎಂದು ಅಲ್ಲಿನ ಅವ್ಯವಸ್ಥೆಯ ವಿರುದ್ದ ಕಿಡಿಕಾರಿದರು.
ತುರ್ತಾಗಿ ಉದ್ಯಾನವನದಲ್ಲಿ ಬೋರ್ ಕೊರೆಸಿ ನೀರಿನ ಸೌಕರ್ಯ ಕಲ್ಪಿಸಬೇಕು. ಕತ್ತೆಲೆಯಾಗಿರುವುದರಿಂದ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ವಿದ್ಯುತ್ ಕಲ್ಪಿಸಬೇಕು. ಹೂವಿನ ಗಿಡಗಳನ್ನು ಬೆಳೆಸಿ ಇಲ್ಲೊಂದು ರೂಂ ಕಟ್ಟಿಕೊಟ್ಟರೆ ಉದ್ಯಾನವನವನ್ನು ನಾವುಗಳೆ ನಿರ್ವಹಣೆ ಮಾಡುತ್ತೇವೆ. ಅಭಿವೃದ್ದಿಗಾಗಿ ಬಿಡುಗಡೆಯಾಗಿರುವ 40 ಲಕ್ಷ ರೂ.ಗಳಲ್ಲಿ ಯಾವ್ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎನ್ನುವುದಕ್ಕೆ ಲೆಕ್ಕ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಸಿ.ಕೆ.ಗೌಸ್‍ಪೀರ್ ಎಚ್ಚರಿಸಿದರು.
ಪುನೀತ್ ಕಬ್ಬಿಣದ, ರಾಜೇಶ್, ಶೇಖ್ ಕಲೀಂವುಲ್ಲಾ, ಮಹಮದ್ ಜಿಕ್ರಿಯಾವುಲ್ಲಾ, ಬಾಬು, ಚೇತನ್, ಪರಶುರಾಂ, ಸುರೇಶ್, ರಘು ಇನ್ನು ಮುಂತಾದವರು ಡಾ.ವಿಷ್ಣುವರ್ಧನ್‍ರವರ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದರು.