ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿಯಲ್ಲಿ ಇಡೀ ಊರಿಗೆ ಊರೇ ಬಂಧನದ ಭೀತಿಯಲ್ಲಿದೆ. ಕೊಲೆ ಆರೋಪಿ ಮೇಲೆಯೇ ಕೊಲೆ ಯತ್ನ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಇಡೀ ಊರಿಗೆ ಊರೇ ಬಂಧನದ ಭೀತಿಯನ್ನು ಎದುರಿಸತ್ತಿದೆ.
ಪೊಲೀಸರು ಊರಿನಲ್ಲಿರುವ ಸಾವಿರಕ್ಕೂ ಹೆಚ್ಚು ಜನರ ಮೇಲೆ ಕೇಸ್ ದಾಖಲಿಸಿದ ಬಳಿಕ ಆತಂಕದಿಂದ ಇಡೀ ಊರಿಗೆ ಊರೇ ಜನರಿಲ್ಲದೆ ಬಿಕೋ ಎನ್ನುತ್ತಿದೆ. ನಂಬಿಹಳ್ಳಿ ಗ್ರಾಮದಲ್ಲಿ ಈಗ ಜನರೇ ಕಾಣುತ್ತಿಲ್ಲ. ಮಹಿಳೆಯರು, ಮಕ್ಕಳು, ವೃದ್ದರನ್ನು ಬಿಟ್ಟರೆ ಬಹುತೇಕ ಪುರುಷರು ಊರು ತೊರೆದಿದ್ದಾರೆ.
ಕೋಲಾರದ ನಂಬಿಹಳ್ಳಿ ಗ್ರಾಮದ ನಾಗೇಶ್ ಎಂಬಾತ ರಾಧಾ ಎಂಬಾಕೆಯನ್ನು ಕೊಚ್ಚಿ ಕೊಲೆ ಮಾಡಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಾಗೇಶ್ ಹೊಟೇಲ್ ಒಂದರಲ್ಲಿ ಅವಿತು ಕುಳಿತಿದ್ದ. ಪತ್ನಿ ರಾಧಾ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಮಾವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಾಗೇಶ್ ನನ್ನು ಬಂಧಿಸಲು ಆತನ ಕಾಲಿಗೆ ಗುಂಡೇಟು ಹಾರಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ, ಸ್ಥಳೀಯರು ಆಕ್ರೋಶಗೊಂಡು ಆತನ ಮೇಲೆ ಹಲ್ಲೆನಡೆಸಿದ್ದರು. ಪೊಲೀಸರು ತಡೆಯಲು ಹೋದಾಗಲು ಲೆಕ್ಕಿಸದೆ ಹಲ್ಲೆ ಯತ್ನ ನಡೆಸಿದ್ದರು. ಈ ಸಂಬಂಧ ಊರಿನ ಸಾವಿರಕ್ಕೂ ಹೆಚ್ಚು ಜನರ ಮೇಲೆ ಕೇಸ್ ದಾಖಲಾಗಿದೆ.