ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಿಂದಾನೇ ಜನ ಆತಂಕದಲ್ಲಿದ್ದಾರೆ. ಇದರ ನಡುವೆ ಅತ್ತ ಕೇರಳದಲ್ಲಿ ನಿಫಾ, ಇತ್ತ ಮುಂಬೈನಲ್ಲಿ ಝಿಕಾ ವೈರಸ್ ಎಲ್ಲರ ತಲೆ ಕೆಡಿಸಿದೆ. ರಾಜ್ಯದಲ್ಲೂ ಆತಂಕ ಶುರುವಾಗಿದೆ. ಯಾಕಂದ್ರೆ ಈ ಎರಡು ವೈರಸ್ ಗಳು ಒಬ್ಬರಿಂದ ಮತ್ತೊಬ್ಬರಿಗೆ ಬಹಳ ಬೇಗನೇ ಹರಡಲಿವೆ. ಹೀಗಾಗಿ ರಾಜ್ಯಕ್ಕೆ ಬೇರೆ ರಾಜ್ಯದಿಂದ ಜನ ಓಡಾಡುವ ಕಾರಣಕ್ಕೆ ರಾಜ್ಯದಲ್ಲೂ ಆತಂಕ ಮನೆ ಮಾಡಿದೆ.
ಕೇರಳದಲ್ಲಿ ನಿಫಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ಕೂಡ ಒಬ್ಬ ವ್ಯಕ್ತಿಗೆ ನಿಫಾ ವೈರಸ್ ಪತ್ತೆಯಾಗಿದೆ. ಒಟ್ಟು ಆರು ಜನರಲ್ಲಿ ನಿಫಾ ವೈರಸ್ ಪತ್ತೆಯಾಗಿದೆ. ಕೇರಳದಲ್ಲಿ ಕಟ್ಟೆಚ್ಚರ ವಹಿಸಿದ್ದು, ದಕ್ಷಿಣ ಕನ್ನಡದಲ್ಲೂ ವೈರಸ್ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಈಡೀಸ್ ಸೊಳ್ಳೆಯಿಂದ ಹರಡುವ ರೋಗ ಝಿಕಾ ವೈರಸ್. ಬಹಳ ವರ್ಷಗಳ ಹಿಂದೆ ಝಿಕಾ ವೈರಸ್ ಮುಂಬೈನಲ್ಲಿ ಪತ್ತೆಯಾಗಿತ್ತು. ಇದೀಗ ಮತ್ತೆ ಮುಂಬೈನಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಎರಡು ರಾಜ್ಯದಲ್ಲಿ ಹರಡುತ್ತಿರುವ ವೈರಸ್ ಗಳಿಂದಾಗಿ ರಾಜ್ಯದ ಜನರಲ್ಲಿ ಆತಂಕ ಮನೆ ಮಾಡಿದೆ. ಆರೋಗ್ಯ ಇಲಾಖೆಯಿಂದ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.