ರಾಜ್ಯದಲ್ಲಿ ಮುಂಗಾರು ಕೈಕೊಟ್ಟು ರೈತ ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ. ರಾಜ್ಯದಲ್ಲಿ ಸಾಕಷ್ಟು ತಾಲೂಕುಗಳಲ್ಲಿ ಬರದ ಛಾಯೆ ಇದೆ. ಇದೀಗ 161 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ರಾಜ್ಯಪಾಲರ ಆದೇಶಾನುಸಾರ ಬರಪೀಡಿತ ಪ್ರದೇಶದ ಘೋಷಣೆ ಮಾಡಲಾಗಿದೆ.
2023-24ನೇ ಸಾಲಿನಲ್ಲಿ 161 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಕಂಡು ಬಂದಿದೆ. ಈ ಪೈಕಿ 161 ತಾಲೂಕುಗಳು ಬರಪೀಡಿತ ತಾಲೂಕುಗಳು ಹಾಗೂ 34 ತಾಲೂಕುಗಳನ್ನು ಸಾಮಾನ್ಯ ಬರಪೀಡಿತ ತಾಲೂಕು ಎಂದು ಆದೇಶದಲ್ಲಿ ಘೋಷಣೆ ಮಾಡಲಾಗಿದೆ.
ಇದು ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದು, ಮುಂದಿನ 6 ತಿಂಗಳುಗಳ ಕಾಲ ಅಥವಾ ಮುಂದಿನ ಆದೇಶ ಬರುವ ತನಕ ಘೋಷಣೆಯ ಆದೇಶ ಚಾಲ್ತಿಯಲ್ಲಿರುತ್ತದೆ. ರಾಜ್ಯದ ಮಳೆ, ಬೆಳೆ ಜಲಾಶಯಗಳ ಸಂಗ್ರಹಣಾ ಅಂತರ್ಜಲ, ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಕುರಿತು ಕಾಲಕಾಲಕ್ಕೆ ರಾಜ್ಯ ಹವಮಾನ ಅವಲೋಕನಾ ಸಮಿತಿಯು ಪರಿಶೀಲಿಸಿದೆ. ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸರ್ಕಾರದ ಮುಖ್ಯ ಕಾರ್ಯದರ್ಶಿರವರು ಅವಲೋಕಿಸಿರುತ್ತಾರೆ. ಕೇಂದ್ರ ಸರ್ಕಾರದ ಬರ ಕೈಪಿಡಿ-2020 ರನ್ವಯ ಕಡ್ಡಾಯ ಮತ್ತು ತತ್ಪರಿಣಾಮ ಸೂಚಕಗಳ ನಿರಂತರ ಮೇಲ್ವಿಚಾರಣೆಯ ಆಧಾರದ ಮೇಲೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದಿನಾಂಕ 1/6/2023 ರಿಂದ 19/8/2023 ಅವಧಿಯ ವರದಿಯಂತೆ ರಾಜ್ಯದಲ್ಲಿ 487 ಮಿ. ಮೀ. ಮಳೆಯಾಗಿದ್ದು, ವಾಡಿಕೆ ಮಳೆ (635 ಮಿ. ಮೀ.)ಗೆ ಹೋಲಿಸಿದಾಗ ಶೇ.23ರಷ್ಟು ಮಳೆಕೊರತೆ ಕಂಡು ಬಂದಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಚಿತ್ರದುರ್ಗದ ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.