ಸುದ್ದಿಒನ್, ಚಿತ್ರದುರ್ಗ ಸೆ. 13 : ಪ್ರಸಕ್ತ ವರ್ಷದ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪರಿಸರಕ್ಕೆ ಮಾರಕವಾಗಿರುವ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ಮೂರ್ತಿಗಳ ಮಾರಾಟ ಹಾಗೂ ಬಳಕೆ ಮಾಡದಂತೆ ನಿಷೇಧಿಸಲಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಧಿಕಾರಿಗಳ ತಂಡ ವಿವಿಧೆಡೆ ದಾಳಿ ನಡೆಸಿ, ಒಟ್ಟು 12 ಪಿಒಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಪರಿಸರ ಅಧಿಕಾರಿ ಪ್ರಕಾಶ್ ಅವರು ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ 12 ಪಿಒಪಿ ಗಣೇಶ ವಿಗ್ರಹಗಳ ವಶ : ಅಧಿಕಾರಿಗಳ ತೀವ್ರ ನಿಗಾ pic.twitter.com/vrmOJqptV8
— suddione-kannada News (@suddione) September 13, 2023
ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು, ಮಣ್ಣಿನಿಂದ ಮಾಡಿರುವ ಗಣೇಶ ಮೂರ್ತಿಗಳನ್ನು ಬಳಸಬೇಕು, ಪರಿಸರಕ್ಕೆ ಮಾರಕವಾಗಿರುವ ಹಾಗೂ ರಾಸಾಯನಿಕಯುಕ್ತ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಬಳಸದಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು.
ಅಲ್ಲದೆ ಜಿಲ್ಲೆಯಲ್ಲಿ ಈ ಕುರಿತು ನಿಗಾ ವಹಿಸಿ, ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿ, ಪಿಒಪಿ ಗಣೇಶ ಮೂರ್ತಿಗಳ ಬಳಕೆ ಅಥವಾ ಮಾರಾಟ ಕಂಡುಬಂದಲ್ಲಿ, ಅವುಗಳನ್ನು ವಶಕ್ಕೆ ಪಡೆದು, ಕ್ರಮ ವಹಿಸುವಂತೆ ನಿರ್ದೇಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿಯೂ ತೀವ್ರ ನಿಗಾ ವಹಿಸಿದ್ದು, ಜಿಲ್ಲೆಯ ಅಲ್ಲಲ್ಲಿ ದಾಳಿ ನಡೆಸಿ, ನಿಷೇಧಿತ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ, ಅವುಗಳನ್ನು ವಶಕ್ಕೆ ಪಡೆದುಕೊಂಡಿದೆ.
ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ರೇಣುಕಾ, ಪರಿಸರ ಅಭಿಯಂತರ ಜಾಫರ್, ಪರಿಸರ ಅಧಿಕಾರಿ ಪ್ರಕಾಶ್ ಮುಂತಾದ ಅಧಿಕಾರಿಗಳು, ನಗರದ ವಿವಿಧೆಡೆ ಸಂಚರಿಸಿ, ಮಾರಾಟಕ್ಕೆ ಇರಿಸಿದ್ದ ಹಾಗೂ ಸಾಗಾಣಿಕೆ ಮಾಡಲಾಗುತ್ತಿದ್ದ ಪಿಒಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ಅದೇ ರೀತಿ ಹೊಸದುರ್ಗ ತಾಲ್ಲೂಕು ಮಾವಿನಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿಯೂ 04 ಪಿಒಪಿ ಗಣೇಶ ಮೂರ್ತಿಗಳನ್ನು ಅಲ್ಲಿನ ಪಿಡಿಒ ವಶಕ್ಕೆ ಪಡೆದುಕೊಂಡಿರುತ್ತಾರೆ.
ಜಿಲ್ಲೆಯಲ್ಲಿ ಬುಧವಾರದಂದು ಒಟ್ಟಾರೆ 12 ಪಿಒಪಿ ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪರಿಸರಕ್ಕೆ ಹಾನಿಯಾಗದಂತೆ, ನಿಯಮಾನುಸಾರ ವಿಲೇವಾರಿ ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಯಾರೂ ಕೂಡ ಪರಿಸರಕ್ಕೆ ಹಾನಿ ಉಂಟು ಮಾಡುವ ಪಿಒಪಿ ಗಣೇಶ ಮೂರ್ತಿಗಳ ಬಳಕೆ ಮತ್ತು ಮಾರಾಟ ನಿಷೇಧಿಸಲಾಗಿದ್ದು, ಯಾರೂ ಕೂಡ ಗಣೇಶ ಹಬ್ಬಕ್ಕೆ ಪಿಒಪಿ ಗಣೇಶ ವಿಗ್ರಹಗಳನ್ನು ಬಳಸಬಾರದು, ಜೇಡಿ ಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣದಿಂದ ಮಾಡಿರುವ ಗಣೇಶ ಮೂರ್ತಿಯನ್ನು ಹಬ್ಬಕ್ಕೆ ಬಳಸಬೇಕು.
ಜಿಲ್ಲೆಯಲ್ಲಿ ಯಾರಾದರೂ ಪಿಒಪಿ ಗಣೇಶ ಮೂರ್ತಿಯನ್ನು ಮಾರಾಟ ಮಾಡುತ್ತಿದ್ದಲ್ಲಿ, ಅಂತಹ ವಿಗ್ರಹಗಳನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಪರಿಸರ ಅಧಿಕಾರಿ ಪ್ರಕಾಶ್ ಅವರು ತಿಳಿಸಿದ್ದಾರೆ.