ನವದೆಹಲಿ: ಕೆಆರ್ಎಸ್ ನಲ್ಲಿ ದಿನೇ ದಿನೇ ನೀರಿನ ಮಟ್ಟ ಕುಸಿಯುತ್ತಿದೆ. ಈಗಲೂ ಮಳೆ ಬಾರದೆ ಹೋದಲ್ಲಿ ಕುಡಿಯುವ ನೀರಿಗೂ ಬರದ ಛಾಯೆ ಕವಿಯಲಿದೆ ಎಂಬ ಆತಂಕ ರೈತರದ್ದು. ಇದೆಲ್ಲವನ್ನು ಅರ್ಥ ಮಾಡಿಕೊಂಡು ಕಾವೇರಿ ನೀರು ನಿಯಂತ್ರಣ ಸಮಿತಿ ಇಂದು ಕರ್ನಾಟಕದ ಪರವಾಗಿಯೆ ತೀರ್ಪು ನೀಡಲಿದೆ ಎಂದೇ ರೈತರು ಭಾವಿಸಿದ್ದರು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಮತ್ತೆ ಸೂಚನೆ ನೀಡಿದೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆದಿದೆ. ಈ ಸಭೆಯಲ್ಲು ತಮಿಳುನಾಡು ಹಾಗೂ ಕರ್ನಾಟಕದ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆ ಮುಗಿದ ಬಳಿಕ ತಮಿಳುನಾಡಿಗೆ ನೀರು ಹರಿಸುವಂತೆ ಮತ್ತೆ ಸೂಚನೆ ನೀಡಿದ್ದಾರೆ. ಇದು ಕರ್ನಾಟಕದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದೇ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮಂಡ್ಯದಲ್ಲಿ ಕಾವೇರಿಗಾಗಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ಆದರೆ ತೀರ್ಪು ಯಾವಾಗ ತಮಿಳುನಾಡಿನ ಪರವಾಗಿ ನೀಡಿದರೋ ರೈತರ ಪ್ರತಿಭಟನೆ ಮತ್ತಷ್ಟು ಹೆಚ್ಚಾಗಿದೆ. ಆಕ್ರೋಶ ಜಾಸ್ತಿಯಾಗಿದೆ. ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಪ್ರತಿಭಟಿಸುತ್ತಿದ್ದಾರೆ.
ತಮಿಳುನಾಡಿಗೆ, ಪ್ರತಿದಿನ 5000 ಕ್ಯೂಸೆಕ್ ನಂತೆ ಮುಂದಿನ 15 ದಿನಗಳ ಕಾಲ ನೀರು ಹರಿಸಬೇಕಿದೆ. ಈಗಾಗಲೇ ಕೆಆರ್ಎಸ್ ಡ್ಯಾಂ ನಲ್ಲಿ ನೀರು ಕುಸಿತಕಂಡಿದೆ. ಮಳೆ ಇಲ್ಲದೆ ದಿನೇ ದಿನೇ ಕಾವೇರಿ ಬರಿದಾಗುತ್ತಿದ್ದಾಳೆ. ಹೀಗಿರುವಾಗ ತಮಿಳುನಾಡಿಗೂ ನೀರು ಹರಿಸಿದರೆ ನೋಡ ನೋಡುತ್ತಿದ್ದಂತೆ ನಮ್ಮವರಿಗೂ ನೀರಿಲ್ಲದಂತೆ ಆಗಲಿದೆ.