ಮೈಸೂರು : ಇಂದು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಟೋ ಚಾಲಕರು, ಕ್ಯಾಬ್ ಚಾಲಕರು, ಖಾಸಗಿ ಬಸ್ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಕೆಲವು ಸ್ಥಳಗಳಿಗೆ ಹೋಗುವುದಕ್ಕೆ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಹೆಚ್ಚುವರಿಯಾಗಿ ಬಿಎಂಟಿಸಿ ಬಸ್ ಗಳನ್ನು ಸರ್ಕಾರ ಬಿಟ್ಟಿದೆ. ಇದೀಗ ಚಾಲಕರ ಪ್ರತಿಭಟನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಈಡೇರಿಸುವಂತಹ ಬೇಡಿಕೆಗಳನ್ನು ಕೇಳಿದರೆ ಹೇಗಾದರೂ ಈಡೇರಿಸಬಹುದು. ಆದರೆ ಇವರು ಈಡೇರಿಸುವುದಕ್ಕೆ ಆಗದೆ ಇರುವಂತಹ ಬೇಡಿಕೆ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ಅನುಕೂಲವಾಗಲಿ ಎಂದು ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಆದರೆ ಅದರಿಂದ ನಷ್ಟ ಆಗುತ್ತಿದೆ ಎಂದು ಇವರ ವಾದವಾಗಿದೆ. ಖಾಸಗಿ ವಾಹನ ಮಾಲೀಕರ ಡಿಮ್ಯಾಂಡ್ ಸರಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೇಸರ ಹೊರ ಹಾಕಿದ್ದಾರೆ.
ನಷ್ಟ ಆಗುವುದು, ಬಿಡುವುದು ಬೇರೆ ಮಾತು. ಅದನ್ನು ತುಂಬಿಕೊಡಿ ಎಂದರೆ ಅದು ಸಾಧ್ಯವಾ..? ಅದು ಸಾಧ್ಯವಾಗದೆ ಇರುವ ಮಾತು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಹತ್ತಿಕ್ಕುವ ಅಧಿಕಾರ ಯಾರಿಗೂ ಇಲ್ಲ. ಆದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ ಎಂದು ಸಲಹೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳಿಗೆ ಜನ ಬರುತ್ತಿಲ್ಲ, ಆಟೋಗಳಿಗೆ ಜನ ಹತ್ತುತ್ತಿಲ್ಲ ಎಂಬುದು ಬಸ್ ಮಾಲೀಕರ ಹಾಗೂ ಆಟೋ ಚಾಲಕರ ವಾದವಾಗಿದೆ. ಶಕ್ತಿ ಯೋಜನೆಯ ಲಾಭವನ್ನು ಖಾಸಗಿ ಬಸ್ ಗಳಿಗೂ ವಿಸ್ತರಿಸಿ ಎಂದು ಡಿಮ್ಯಾಂಡ್ ಇಟ್ಟಿದ್ದಾರೆ. ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಇಂದು ಬೆಂಗಳೂರು ಬಂದ್ ಹೆಸರಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.