ಬೆಂಗಳೂರು: 32 ಬೇಡಿಕೆಗಳನ್ನು ಮುಂದಿಟ್ಟು ಇಂದು ಬೆಂಗಳೂರು ಬಂದ್ ಮಾಡಿದ್ದರು ವಾಹನ ಚಾಲಕರು. ಆಟೋ ಡ್ರೈವರ್, ಕ್ಯಾಬ್ ಡ್ರೈವರ್, ಖಾಸಗಿ ಬಸ್ ಮಾಲೀಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರತಿಭಟನಾಕಾರರನ್ನು ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಚಿವ ರಾಮಲಿಂಗಾ ರೆಡ್ಡಿ ಅವರು ನೀಡಿದ ಭರವಸೆಗಳಿಗೆ ಖಾಸಗಿ ಸಾರಿಗೆ ಒಕ್ಕೂಟ ಬಂದ್ ಅನ್ನು ಹಿಂತೆಗೆದುಕೊಂಡಿದೆ.
ಇದಾದ ಬಳಿಕ ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, ಖಾಸಗಿ ಸಾರಿಗೆಯವರ ಕೆಲ ಬೇಡಿಕೆಗಳನ್ನು ಈಡೇರಿಸಿವುದಕ್ಕೆ ಒಪ್ಪಿಗೆ ಸೂಚಿಸಿದ್ದೇವೆ. ಕೆಲ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಸಮಯ ಬೇಕಾಗುತ್ತದೆ. ಯಾವುದೇ ಅನುಮತಿ ಇಲ್ಲದೆ, ಬೈಕ್, ಟ್ಯಾಕ್ಸಿ ಓಡಿಸುತ್ತಿದ್ದಾರೆ. ಸದ್ಯದಲ್ಲಿಯೇ ಹೊಸ ಆ್ಯಪ್ ಮಾಡಿಕೊಡುತ್ತೇವೆ ಎಂದಿದ್ದಾರೆ.
ಇನ್ನು ಪ್ರತಿಭಟನೆ ಕೈಬಿಟ್ಟ ಬಳಿಕ ಮಾತನಾಡಿದ ಖಾಸಗಿ ಸಾರಿಗೆ ಒಕ್ಕೂಟಗಳ ಅಧ್ಯಕ್ಷ ನಟರಾಜ್ ಶರ್ಮಾ, 32 ಬೇಡಿಕೆ ಇಟ್ಟಿದ್ದೆವು. ಅದರಲ್ಲಿ 27 ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ. ಹೀಗಾಗಿ ಬಂದ್ ವಾಪಸ್ ಪಡೆಯುತ್ತಿದ್ದೇವೆ. ಟ್ಯಾಕ್ಸ್ ವಿಚಾರವಾಗಿಯೂ ಸಚಿವ ರಾಮಲಿಂಗಾ ರೆಡ್ಡಿ ಅವರು ಭರವಸೆ ನೀಡಿದ್ದಾರೆ ಎಂದಿದ್ದಾರೆ.
ಸದ್ಯಕ್ಕೆ ಖಾಸಗಿ ಬಸ್ ಮಾಲೀಕರು ಸಚಿವರ ಭರವಸೆಗೆ ಹೋರಾಟವನ್ನು ಕೈಬಿಟ್ಟಿದ್ದಾರೆ. ಆದರೆ ಬೇಡಿಕೆ ಈಡೇರಿಸದೆ ಇದ್ದಲ್ಲಿ ನಾಡಿದ್ದು ಮತ್ತೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.