ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆ.11 : ಎಲ್ಲಾ ಸೇರೋಣ ಬನ್ನಿ ಮಾತಾಡೋಣ ಸಂವಾದದ ಮೂಲಕ ರಾಜ್ಯಾದ್ಯಂತ ಸಂಚರಿಸಿ ಜನಜಾಗೃತಿಗೊಳಿಸಲಾಗುವುದೆಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್. ಮೂರು ಪ್ರಬಲ ಪಕ್ಷಗಳ ಜೊತೆ ನಮ್ಮ ಪಕ್ಷ ಪೈಪೋಟಿ ನೀಡಬೇಕಾಗಿದೆ. ಸಿನಿಮಾ ಮೂಲಕ ಪರಿಚಿತನಾಗಿರುವ ನಾನು ದೊಡ್ಡ ರಾಜಕಾರಣಿಯಲ್ಲ. ಅದಕ್ಕಾಗಿ ಜನಸಾಮಾನ್ಯರ ಮಧ್ಯೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ ಉಚಿತವಾಗಿ ಸದಸ್ಯತ್ವ ಅಭಿಯಾನ ನಡೆಸಲಾಗುವುದು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭಾ ಚುನಾವಣಾ ಪೂರ್ವದಲ್ಲಿಯೇ ಘೋಷಿಸಿರುವ ಐದು ಉಚಿತ ಗ್ಯಾರೆಂಟಿಗಳು ನಮ್ಮ ಪ್ರಣಾಳಿಕೆಯಾಗಿತ್ತು. ಅದನ್ನು ಕದ್ದು ಈಗ ರಾಜ್ಯದ ಜನತೆಗೆ ನೀಡುತ್ತಿದ್ದಾರೆ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಯಾವ ಪಕ್ಷ ಜನತೆಗೆ ಒಳ್ಳೆಯದು ಮಾಡಿದರೂ ನಮಗೆ ಸಂತೋಷ. ಗ್ಯಾರೆಂಟಿಗಳನ್ನು ಘೋಷಿಸುವ ಮುನ್ನ ಸಾಧಕ-ಬಾಧಕಗಳನ್ನು ಗಮನಿಸಿ ಜಾರಿಗೊಳಿಸಬೇಕಿತ್ತು. ಅದಕ್ಕಾಗಿ ಊರೂರಿಗೆ ಹೋಗಿ ಜನರ ಜೊತೆ ಚರ್ಚಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲರವರ ಸಾಧನೆಗಳನ್ನು ರಾಜ್ಯದ ಜನರಿಗೆ ತಿಳಿಸುವುದು ನಮ್ಮ ಉದ್ದೇಶ ಎಂದರು.
ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯಡಿ ಹಣ ತಲುಪಿಲ್ಲ. ಹಣಕಾಸಿನ ವ್ಯವಸ್ಥೆ, ತಾಂತ್ರಿಕ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕಿತ್ತು. ಸಮಾಜ ಕಲ್ಯಾಣ ಇಲಾಖೆಗೆ 34 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿರುವ ಹಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹನ್ನೊಂದು ಸಾವಿರ ಕೋಟಿ ರೂ.ಗಳನ್ನು ತೆಗೆದು ಉಚಿತ ಯೋಜನೆಗಳಿಗೆ ನೀಡಿರುವುದು ಕಣ್ಣೊರೆಸುವ ತಂತ್ರ. ಹದಿನಾಲ್ಕು ಅಕಾಡೆಮಿ, ನಾಲ್ಕು ಅಭಿವೃದ್ದಿ ಪ್ರಾಧಿಕಾರಗಳಿಗೆ ಹತ್ತು ಪೈಸೆ ದುಡ್ಡು ಕೊಟ್ಟಿಲ್ಲ. ನುಡಿದಂತೆ ನಡೆಯದಿರುವುದು, ಸುಳ್ಳು ಹೇಳುವುದೇ ಕಾಂಗ್ರೆಸ್ ಸಾಧನೆ ಎಂದು ವ್ಯಂಗ್ಯವಾಡಿದರು.
ಯಾವ ಪ್ರಗತಿಯೂ ಇಲ್ಲ. ಅಭಿವೃದ್ದಿಯೂ ಇಲ್ಲ. ಉಚಿತ ಐದು ಗ್ಯಾರೆಂಟಿಗಳನ್ನು ಮುಚ್ಚಿಕೊಳ್ಳಲು ಅಲ್ಲಲ್ಲಿ ಕಿತ್ತು ಹಣ ಕೊಡುತ್ತಿದ್ದಾರೆ. ಅಕಾಡೆಮಿ ಹಾಗೂ ಅಭಿವೃದ್ದಿ ಪ್ರಾಧಿಕಾರಗಳಿಗೆ ಹದಿನೈದು ದಿನದಲ್ಲಿ ನೇಮಕ ಮಾಡಿ ಹಣ ಬಿಡುಗಡೆಗೊಳಿಸದಿದ್ದರೆ ಆಮ್ ಆದ್ಮಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದ ಮುಖ್ಯಮಂತ್ರಿ ಚಂದ್ರು ರಾಜ್ಯದಲ್ಲಿ ರಂಗಮಂದಿರಗಳು ಸೊರಗುತ್ತಿವೆ. ರಾಜ್ಯದಲ್ಲಿರುವುದು ಬಣ್ಣದ ಕಣ್ಣೊರೆಸುವ ಸರ್ಕಾರ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪಾರ್ಲಿಮೆಂಟ್ ಹಾಗೂ ಮಹಾನಗರಪಾಲಿಕೆ ಚುನಾವಣೆಗಳು ಯಾವಾಗ ಬೇಕಾದರೂ ನಡೆಯಬಹುದು. ನಮ್ಮ ಪಕ್ಷದಿಂದ ಸ್ಪರ್ಧಿಸುತ್ತೇವೆಂದು ತಿಳಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ರಾಥೋಡ್ ಮಾತನಾಡಿ ಎಲ್ಲಾ ಜಿಲ್ಲೆಗಳಲ್ಲಿಯೂ ನಮ್ಮ ಪಕ್ಷದ ಕಾರ್ಯಕರ್ತರಿದ್ದಾರೆ. ಜನರ ಸಮಸ್ಯೆಗಳನ್ನು ತಿಳಿದುಕೊಳ್ಳುವುದಕ್ಕಾಗಿ ಜನಜಾಗೃತಿ, ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದೇವೆ. ಎರಡನೆ ಸಂವಾದಕ್ಕೆ ತುಮಕೂರಿನಿಂದ ಚಾಲನೆ ನೀಡಲಾಗಿದೆ ಎಂದರು.
ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶ್ರೀಮತಿ ಸ್ವಾಮಿ ಮಾತನಾಡಿ ಮಹಿಳಾ ಸಬಲೀಕರಣ, ಸಮಾನತೆ ಎನ್ನುವುದು ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಆದರೆ ಆಮ್ ಆದ್ಮಿ ಪಕ್ಷದಲ್ಲಿ ಮಹಿಳೆಯರಿಗೆ ಸಮಾನತೆ ನೀಡಲಾಗಿದೆ. ರಾಜಕೀಯದಲ್ಲಿ ಮಹಿಳೆಯರು ಮುಂದೆ ಬರಬೇಕು. ವಿಪರ್ಯಾಸವೆಂದರೆ ಮಹಿಳೆ ಚುನಾವಣೆಯಲ್ಲಿ ಗೆದ್ದರೆ ಪುರುಷರು ಅಧಿಕಾರ ನಡೆಸುವುದು ತಪ್ಪಬೇಕು ಎನ್ನುವುದು ನಮ್ಮ ಉದ್ದೇಶ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಮಹಿಳೆಯರನ್ನು ಸ್ಪರ್ಧೆಗಿಳಿಸಲಾಗುವುದು ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ್ ಬಿ.ಇ. ಲೋಕೇಶ್, ಜಂಬೂನಾಯ್ಕ ಪತ್ರಿಕಾಗೋಷ್ಠಿಯಲ್ಲಿದ್ದರು.