ಚಿತ್ರದುರ್ಗದಲ್ಲಿ ಆರನೇ ದಿನಕ್ಕೆ ಲಾರಿ ಮಾಲೀಕರು ಹಾಗೂ ಚಾಲಕರ ಧರಣಿ : ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭೇಟಿ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಸೆಪ್ಟೆಂಬರ್. 10  : ವೇದಾಂತ ಗಣಿ ಗುತ್ತಿಗೆ ಕಂಪನಿಯಿಂದ ಮೂರನೆ ಗೇಟ್ ಮುಖಾಂತರ ಕಳೆದ ಹದಿನೈದು ವರ್ಷಗಳಿಂದಲೂ ಅದಿರು ಸಾಗಿಸುತ್ತಿದ್ದ ಲಾರಿಗಳ ಸಂಚಾರವನ್ನು ಕೆಲವು ಪಟ್ಟಭದ್ರಹಿತಾಸಕ್ತಿಗಳು ಮುಚ್ಚಿಸಿರುವುದನ್ನು ವಿರೋಧಿಸಿ ಆರು ದಿನಗಳಿಂದ ಒನಕೆ ಓಬವ್ವ ವೃತ್ತದಲ್ಲಿ ಲಾರಿ ಮಾಲೀಕರು ಹಾಗೂ ಚಾಲಕರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.

ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಂದ ಒಂದುವರೆ ಸಾವಿರ ಲಾರಿಗಳು ಮೂರನೆ ಗೇಟ್ ಮುಖಾಂತರ ಅದಿರನ್ನು ಸಾಗಿಸುತ್ತಿದ್ದವು. ಸ.ನಂ. 5, 6 ರ ಬಿದಿರು ಬೊಮ್ಮೇನಹಳ್ಳಿಯಲ್ಲಿ ಲಾರಿಗಳನ್ನು ಅರ್ಧ ಕಿ.ಮೀ. ಸಂಚರಿಸಲು ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಿದ್ದಾರೆ.
ಪಹಣಿಯಲ್ಲಿ ಕಂದಾಯ ಇಲಾಖೆಗೆ ಸೇರಿದ ಜಮೀನು ಎಂದು ನಮೂದಾಗಿದೆ. 2017 ರ ನೋಟಿಫಿಕೇಷನ್ ಪ್ರಕಾರ 2023 ರವರೆಗೂ ನಿರಂತರವಾಗಿ ಅದಿರನ್ನು ಸಾಗಿಸಲಾಗುತ್ತಿತ್ತು. ಈಗ ಏಕಾಏಕಿ ಲಾರಿಗಳ ಸಂಚಾರ ಸ್ಥಗಿತಗೊಳಿಸಿರುವುದರಿಂದ ಇದನ್ನೆ ನಂಬಿಕೊಂಡಿರುವ 25 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಂದಿವೆ ಎಂದು ಮುಷ್ಕರ ನಿರತ ಲಾರಿ ಮಾಲೀಕರು ಹಾಗೂ ಚಾಲಕರುಗಳು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಅಳಲು ತೋಡಿಕೊಂಡರು.

ಲಾರಿ ಮಾಲೀಕರು, ಚಾಲಕರುಗಳ ವೇದನೆ ಆಲಿಸಿದ ಸಚಿವ ಡಿ.ಸುಧಾಕರ್ ಸಂಬಂಧಪಟ್ಟ ಗಣಿ ಹಾಗೂ ಅರಣ್ಯ ಇಲಾಖೆ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಸೋಮವಾರದ ನಂತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಧರಣಿನಿರತರಿಗೆ ಭರವಸೆ ನೀಡಿದರು.

ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕೆ.ಪಿ.ಸಿ.ಸಿ. ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಈ ಸಂದರ್ಭದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *