ದಾವಣಗೆರೆ: ಇತ್ತಿಚೆಗೆ ಸ್ವಪಕ್ಷದವರ ಮೇಲೆಯೇ ಎಂಪಿ ರೇಣುಕಾಚಾರ್ಯ ಅವರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ರೇಣುಕಾಚಾರ್ಯ(Renukacharya) ಅವರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಕೂಡ ಸ್ವಪಕ್ಷದವರ ಮೇಲೆ ಆಕ್ರೋಶ ಹೊರ ಹಾಕಿದ್ದು, ನನ್ನ ಮೇಲೆ ತೂಗುಗತ್ತಿ ತೂಗುತ್ತಾ ಇದೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ. ನೋಟೀಸ್ ಗೆ ಉತ್ತರವನ್ನು ಕೊಡುವುದಿಲ್ಲ ಎಂದಿದ್ದಾರೆ.
ಮಾಜಿ ಶಾಸಕ ಟಿ ಗುರುಸಿದ್ಧನಗೌಡ ಅವರನ್ನು ಉಚ್ಛಾಟನೆ ಮಾಡಿದ ಕಾರಣ ಅವರ ನಿವಾಸಕ್ಕೆ ರೇಣುಕಾಚಾರ್ಯ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಗ್ರಾಮಪಂಚಾಯತಿಯಲ್ಲೂ ಗೆಲ್ಲದವರಿಗೆ ಪಕ್ಷದ ಜವಾಬ್ದಾರಿ ನೀಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೆ ಪಕ್ಷದ ಸೋಲಿಗೆ ಕಾರಣವಾಗಿದೆ. ಈಗ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆದ ಮೇಲೆ ಮತ್ತೆ ಯಡಿಯೂರಪ್ಪ ಅವರನ್ನು ಮುಂದೆ ಬಿಟ್ಟಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಬಿಎಸ್ ಯಡಿಯೂರಪ್ಪ ನೋಡದ ಹಳ್ಳಿಯಿಲ್ಲ ಎಂದಿದ್ದಾರೆ.
ನಾನು ಕೂಡ ಎಂಪಿ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕಾದು ನೋಡುತ್ತೇನೆ. ಟಿಕೆಟ್ ಸಿಗದೆ ಹೋದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ನನ್ನ ಹೋರಾಟ ಯಾರ ವಿರುದ್ಧವೂ ಕತ್ತಿ ಮಸೆಯೋಕೆ ಅಲ್ಲ. ಸಂಘಟನೆ ಉಳಿಸುವುದಕ್ಕೆ ಕೆಲಸ ಮಾಡುತ್ತೇನೆ. ಮಾಡಾಳು ವಿರುಪಾಕ್ಷಪ್ಪ ಅವರನ್ನು ಭೇಟಿಯಾಗುತ್ತೇನೆ. ನನ್ನನ್ನು ರೆಬಲ್ ರೇಣುಕಾಚಾರ್ಯ ಎಂದು ಕರೆಯಲಿ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದವರ ಮೇಲೆಮೊದಲು ಕ್ರಮ ತೆಗೆದುಕೊಳ್ಳಲಿ. ಮಾಜಿ ಶಾಸಕ ಗುರುಸಿದ್ದನಗೌಡ ಅವರಿಗೆ ನೋಟೀಸ್ ನೀಡದೆ ಉಚ್ಛಾಟನೆ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.