ಸುದ್ದಿಒನ್ : ಜೀವನದಲ್ಲಿ ತುಂಬಾ ಕೆಟ್ಟ ಸನ್ನಿವೇಶಗಳು ಬರುತ್ತವೆ. ಅಂತಹ ಸಂದರ್ಭದಲ್ಲಿ ಧೃತಿಗೆಡದೆ ತಾಳ್ಮೆಯಿಂದ ಇರಬೇಕು. ನಿಮ್ಮ ಜೀವನದ ಮೇಲೆ ನೀವು ನಿಯಂತ್ರಣ ಹೊಂದಿರಬೇಕು. ಆಗ ಮಾತ್ರ ನೀವು ಯಶಸ್ವಿಯಾಗುತ್ತೀರಿ.
ನಾವು ಜೀವನದಲ್ಲಿ ಹೆಚ್ಚು ಬಾರಿ ಜಗಳವಾಡುವುದು ಬೇರೆಯವರ ಜೊತೆಗಲ್ಲ. ನಮ್ಮ ಜೊತೆಗೆ, ನಮ್ಮ ಮನಸ್ಸಿನ ಜೊತೆಗೆ ಆಗಾಗ ಜಗಳವಾಡುತ್ತಿರುತ್ತೇವೆ. ನಮ್ಮ ಮನಸ್ಸನ್ನು ಗೆಲ್ಲಲು ದೊಡ್ಡ ಯುದ್ಧವನ್ನೇ ಮಾಡಬೇಕಾಗುತ್ತದೆ. ನಾವು ಇತರರನ್ನು ಸುಲಭವಾಗಿ ಗೆಲ್ಲಬಹುದು ಆದರೆ ನಮ್ಮನ್ನು ನಾವೇ ಗೆಲ್ಲುವುದು ತುಂಬಾ ಕಷ್ಟ.
ಯಾರ ಜೀವನವೂ ಸುಗಮವಾಗಿ ಸಾಗುವುದಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅವರಿಗೇನು ಕಮ್ಮಿ ಸುಖವಾಗಿದ್ದಾರೆ ಎಂದು ಇತರರ ಬಗ್ಗೆ ಭಾವಿಸುವುದು ಸುಲಭ. ಆದರೆ ಅವರ ಜೀವನದಲ್ಲಿ ಏನು ನಡೆಯುತ್ತದೆ ಎಂದು ಹತ್ತಿರದಿಂದ ನೋಡಿದಾಗ ಮಾತ್ರ ಅವರ ಸಮಸ್ಯೆಗಳೇನು ಎಂಬುದು ತಿಳಿಯುತ್ತದೆ.
ನಮಗೆ ಮಾತ್ರ ಸಮಸ್ಯೆಗಳಿವೆ ಎಂದು ಭಾವಿಸಿ ಎದೆಗುಂದಬೇಡಿ. ನಾವು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆ ಸಮಯದಲ್ಲಿ ನಾವು ಎಷ್ಟು ಧೈರ್ಯಶಾಲಿಯಾಗಿ, ತಾಳ್ಮೆಯಿಂದ ಮತ್ತು ಸಕಾರಾತ್ಮಕವಾಗಿರುತ್ತೇವೆ ಎಂಬುದು ಮುಖ್ಯ.
ಕೆಲವೊಮ್ಮೆ ಬದುಕಿನ ಪರಿಸ್ಥಿತಿಗಳು ತುಂಬಾ ಹದಗೆಡಬಹುದು. ಆಗ ಸ್ವಲ್ಪ ಶಾಂತ ರೀತಿಯಿಂದ ಮತ್ತು ಸಕಾರಾತ್ಮಕವಾಗಿದ್ದರೆ, ಜೀವನದಲ್ಲಿ ಬೆಳಕು ಖಂಡಿತವಾಗಿಯೂ ಬರುತ್ತದೆ. ಕತ್ತಲೆಯ ನಂತರ ಬೆಳಕು ಬರಲೇಬೇಕಲ್ಲವೇ ? ಕತ್ತಲು ಮತ್ತು ಬೆಳಕು ಎರಡು ಬಂದಾಗ ಮಾತ್ರ ಒಂದು ದಿನ ಪೂರ್ಣವಾಗುತ್ತದೆ. ಹಾಗಾಗಿ ಕಷ್ಟಗಳ ನಂತರ ನಮಗೆ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿರಬೇಕು. ಈ ಕೆಡುಕು ಹೆಚ್ಚು ಕಾಲ ನಮ್ಮೊಂದಿಗೆ ಇರುವುದಿಲ್ಲ. ನೀವು ಈ ರೀತಿ ಸಕಾರಾತ್ಮಕವಾಗಿದ್ದರೆ ಮಾತ್ರ ಬದುಕು ಬದಲಾಗುತ್ತದೆ. ನಾವು ಮಾನಸಿಕವಾಗಿ ಬಲಶಾಲಿಗಳಾಗಿದ್ದರೆ, ನಾವು ಮತ್ತು ನಮ್ಮ ಪರಿಸ್ಥಿತಿಗಳು ಬೇಗನೆ ಸುಧಾರಿಸುತ್ತವೆ. ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿ ಮುಖ್ಯ.
ಕಷ್ಟಗಳು ಬಂದಾಗ ನಾವು ಅಳುತ್ತೇವೆ.ನಮ್ಮನ್ನು ನಾವು ಮತ್ತು ಇತರರನ್ನು ಶಪಿಸಿಕೊಳ್ಳುತ್ತೇವೆ. ಊಟ, ನೀರು ಮತ್ತು ನಿದ್ದೆ ಬಿಟ್ಟು ನರಳುತ್ತಿದ್ದರೆ ಕಷ್ಟವು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಹಾಗಾಗಿ ನೀವು ಎಷ್ಟೇ ಕಷ್ಟದಲ್ಲಿದ್ದರೂ ಸಕಾರಾತ್ಮಕವಾಗಿಯೇ ಇದ್ದರೆ, ಆಗುತ್ತಿರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಯೋಚಿಸಿದರೆ ಕಾಯಕವೇ ಕೈಲಾಸ ಎಂದು ನಮ್ಮ ಪಾಡಿಗೆ ನಾವು ಮಾಡಬೇಕಾದ ಕರ್ತವ್ಯ ಮಾಡುತ್ತಿದ್ದರೆ ಕಷ್ಟ ಕೂಡಾ ಕಣ್ಮರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಮೊದಲು ನಮ್ಮನ್ನು ನಾವು ಗೆದ್ದರೆ ಎಲ್ಲವನ್ನೂ ಗೆದ್ದಂತೆ.