ಕಾಡುಗೊಲ್ಲ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ, ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಉದ್ದೇಶಗಳು ಈಡೇರಲು ಸಾಧ್ಯವಿಲ್ಲ : ರಾಜ್ಯಾಧ್ಯಕ್ಷ ರಾಜಣ್ಣ

2 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್ 09 : ಕಾಡುಗೊಲ್ಲ ಸಮುದಾಯವು ಅಭಿವೃದ್ಧಿ ಹೊಂದಬೇಕಾದರೆ ಎಸ್ ಟಿ ಮೀಸಲಾತಿ ಅವಶ್ಯಕವಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯನ್ನು ಕಾಡುಗೊಲ್ಲರ  ಹಟ್ಟಿಗಳಲ್ಲಿ ಬಹಿಷ್ಕರಿಸಿ ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಿದಾಗ ಮಾತ್ರ ನಮ್ಮ ಹಕ್ಕನ್ನು ಪಡೆಯಲು ಸಾಧ್ಯ ಎಂದು ಕಾಡುಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷ ರಾಜಣ್ಣ ಕರೆ ನೀಡಿದರು.

ತಾಲೂಕಿನ ತಳಕು ಹೋಬಳಿಯ ಯತ್ತಪ್ಪ ಗುಡ್ಡದಲ್ಲಿ ಕಾಡುಗೊಲ್ಲ ಸಮುದಾಯದ ವತಿಯಿಂದ ಆಯೋಜಿಸಿದ್ದ ಕಾಡುಗೊಲ್ಲರ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಡುಗೊಲ್ಲ ಸಮುದಾಯವು ನಮ್ಮ ಹಿಂದಿನ ಪದ್ಧತಿಗಳನ್ನು ಅನುಸರಿಸಿಕೊಂಡು ಬರುತ್ತಿರುವುದರಿಂದ ನಮಗೆ ಮೀಸಲಾತಿ ದೊರೆಯುತ್ತಿಲ್ಲ ಸಮುದಾಯದಲ್ಲಿನ ಕೆಲವು ಅನಿಷ್ಟ ಪದ್ದತಿಯ ಆಚರಣೆಗಳನ್ನು ಬದಲಿಸಿಕೊಂಡು ಆಧುನಿಕತೆಯತ್ತ ಮರಳಬೇಕಿದೆ.

ನಮ್ಮ ಮುಂದಿನ ಪೀಳಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕಾದರೆ ಮೀಸಲಾತಿ ಅವಶ್ಯಕವಾಗಿದೆ ಕಾಡುಗೊಲ್ಲ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇರುವುದರಿಂದ ರಾಜಕೀಯ ಪಕ್ಷಗಳು ನಮ್ಮನ್ನು ಹಿಂದೆ ತಳ್ಳುತ್ತಿವೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಉದ್ದೇಶಗಳು ಈಡೇರಲು ಸಾಧ್ಯವಿಲ್ಲ ಹೀಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ಮೂಲಕ ನಮ್ಮ ಹಕ್ಕನ್ನು ಪಡೆಯಲೇಬೇಕಾದ ಅನಿವಾರ್ಯತೆ ಎದುರಾಗಿದೆ ಈಗನಿಂದಲೇ ಎಲ್ಲರೂ ಸಂಘಟಿತರಾಗಿ ಹೋರಾಡೋಣ ಎಂದರು.

ಕಾಡುಗೊಲ್ಲ ಸಮುದಾಯದ ಜಿಲ್ಲಾಧ್ಯಕ್ಷ ರಾಜ್ ಕುಮಾರ್ ಮಾತನಾಡಿ ಸರ್ಕಾರಗಳನ್ನು ನಡೆಸುವ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ನಮ್ಮ ಸರ್ಕಾರ ಬಂದರೆ ಮೀಸಲಾತಿ ನೀಡುತ್ತೇವೆ ಎಂಬ ಮಾತುಗಳಿಂದ ನಮ್ಮ ಮೂಗಿಗೆ ತುಪ್ಪ ಸವರಿ ಮತ ಗಿಟ್ಟಿಸಿಕೊಂಡು ಚುನಾವಣೆಯ ನಂತರ ನಮ್ಮನ್ನು ಕಡೆಗಣಿಸಲಾಗುತ್ತಿದೆ ಗೊಲ್ಲರಹಟ್ಟಿಗಳಲ್ಲಿ ಯುವಕರು ಸಂಘಗಳನ್ನು ರಚಿಸಿಕೊಂಡು ಒಗ್ಗಟ್ಟಾಗಿ ರಾಜ್ಯ ಜಿಲ್ಲಾ ತಾಲೂಕು ಸಂಘಟನೆಗಳು ಹೇಳುವ ವ್ಯಕ್ತಿಗೆ ಹಾಗೂ ನಮ್ಮ ಬೇಡಿಕೆಯನ್ನು ಈಡೇರಿಸುವ ಪಕ್ಷಕ್ಕೆ ಮತ ನೀಡುತ್ತೇವೆ ಎಂಬ ಧ್ವನಿಯನ್ನು ಎತ್ತಿದಾಗ ಮಾತ್ರ ನಮ್ಮ ಮೀಸಲಾತಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಸೇರಿದಂತೆ ಇತರೆ ಬೇಡಿಕೆಗಳು ಈಡೇರಲು ಸಾಧ್ಯ ಎಂದು ತಿಳಿಸಿದರು.

ಕಾಡುಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಎಸ್. ರವಿಕುಮಾರ್ ಮಾತನಾಡಿ ಎತ್ತಪ್ಪ ಗುಡ್ಡವನ್ನು ಅಭಿವೃದ್ಧಿಪಡಿಸಲು ಈಗಾಗಲೇ 1.50 ಕೋಟಿ ಮಂಜೂರು ಆಗಿದ್ದು 30 ಲಕ್ಷ ಬಿಡುಗಡೆಯಾಗಿ ಕೆಲಸ ಪ್ರಾರಂಭವಾಗಿದೆ ಈ ಎತ್ತಪ್ಪ ಗುಡ್ಡವನ್ನು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಿ ಜಾತ್ರೆಯ ರೂಪದಲ್ಲಿ ರಾಜ್ಯದಲ್ಲಿ ಇರುವ ಕಾಡುಗೊಲ್ಲ ಸಮುದಾಯದ ಎಲ್ಲಾ ಬಾಂಧವರು ಸೇರಿ ಆಚರಿಸುವಂತಾಗಬೇಕು ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಒತ್ತಡವನ್ನು ಹೇರಿ ಕಾಡುಗೊಲ್ಲ ಸಮುದಾಯಕ್ಕೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ದೊರಕುವಂತೆ ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಎಲ್ಲ ತಹಶೀಲ್ದಾರ್ ಗಳ ಸಭೆ ನಡೆಸಲು ತೀರ್ಮಾನಿಸಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಎಸ್ಟಿ ಮೀಸಲಾತಿ ಪಡೆಯಲು ಒತ್ತಡ ಹೇರುವ ಸಲುವಾಗಿ ಹೋರಾಟದ ರೂಪುರೇಷೆಗಳನ್ನು ರೂಪಿಸಲಾಗುವುದು ಸಮುದಾಯದ ಜನರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಕೇಳಿಕೊಂಡರು.

ಕಾರ್ಯಕ್ರಮಕ್ಕೆ ಮುನ್ನ ಎತ್ತಪ್ಪ ಗುಡ್ಡದಲ್ಲಿನ ಎತ್ತಪ್ಪ ಸ್ವಾಮಿಯ ಸಮಾಧಿಗೆ ಕಾಡುಗೊಲ್ಲ ಸಮುದಾಯದ ಸಂಪ್ರದಾಯದಂತೆ ಪೂಜೆಯನ್ನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಡುಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಮೀಸೆ ಮಹಾಲಿಂಗಪ್ಪ ಬಾಲರಾಜ್ ದೊಡ್ಡ ನಾಗಯ್ಯ ದೇವರಾಜ್ ರಾಜಣ್ಣ ಕರಿಯಪ್ಪ ರಂಗಸ್ವಾಮಿ ಗೋವಿಂದಪ್ಪ ಸುಂಕಪ್ಪ ಬಸವರಾಜ್ ಸೇರಿದಂತೆ ಕಾಡುಗೊಲ್ಲ ಸಮುದಾಯದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *