ಚಿತ್ರದುರ್ಗ, (ಅ.22) : ಹೊಳಲ್ಕೆರೆ ಕ್ಷೇತ್ರದ ಜನರು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅವರ ಋಣ ತೀರಿಸುವ ಕೆಲಸ ಪ್ರಮಾಣಿಕವಾಗಿ ಮಾಡಿದ್ದೇನೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಹೊಳಲ್ಕೆರೆ ತಾಲೂಕಿನ ಎಚ್.ಡಿ.ಪುರ ಗ್ರಾಮದಲ್ಲಿ ಶುಕ್ರವಾರ ಎಸ್‍ಎಲ್‍ಎನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಮುದಾಯ ಭವನ, ಪಾಕಶಾಲೆ, ಮತ್ತು ವಸತಿ ಗೃಹಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹೊಳಲ್ಕೆರೆ ಕ್ಷೇತ್ರದ ಜನರು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ನಾನು ಮಂತ್ರಿಯಾಗಿ ಅವರ ಋಣ ತೀರಿಸಲು ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಿದ್ದೇನೆ. ಕ್ಷೇತ್ರದ 22 ಕೆರೆಗಳಿಗೆ ನೀರು ತರುವ ಕೆಲಸವನ್ನು ಅನುಷ್ಟಾನಗೊಳಿಸಲು ಕಾರಣನಾಗಿದ್ದೇನೆ. ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಕಾರಣ ಅಪ್ಪರ್ ಭದ್ರ ಯೋಜನೆಯಲ್ಲಿ ಹೊಳಲ್ಕೆರೆಯ ಕೆರೆಗಳಿಗೆ ನೀರು ತುಂಬಿಸಲು ಆಗುವುದಿಲ್ಲವೆಂದು ಕೈಬಿಡಲಾಗಿತ್ತು. ಅದೇ ರೀತಿ ಭರಮಸಾಗರದ ಮೂರು ಕೆರೆಗಳಿಗೆ ನೀರು ತಂದೆ. ಆದರೆ, ಈ ಯೋಜನೆ ಯಶಸ್ವಿಯಾಗಲಿಲ್ಲ. ತರಳಬಾಳು ಜಗದ್ಗುರುಗಳು ಬೇರೆ ಯೋಜನೆ ಸಿದ್ಧಪಡಿಸು ಎಂದು ಹೇಳಿದ್ದರಿಂದ ಮತ್ತೊಂದು ಯೋಜನೆ ರೂಪಿಸಿದೆ. ನಂತರ ತರಳಬಾಳು ಶ್ರೀಗಳು ಇದನ್ನು ಕೈಗೆತ್ತಿಕೊಂಡು ಒಂದೂವರೆ ವರ್ಷದದಲ್ಲಿಯೇ ತುಂಗಾಭದ್ರ ನದಿಯಿಂದ ಭರಮಸಾಗರದ ಭರಮಣ್ಣ ನಾಯಕರ ಕೆರೆಗೆ ಸುಮಾರು 55 ಕಿಮೀನ 5 ಅಡಿ ವ್ಯಾಸವುಳ್ಳ ಒಂದೇ ಪೈಫ್‍ಲೈನ್ ಮೂಲಕ ಕೆರೆಗೆ ನೀರು ಹರಿಸುವ ಜನಪರ ಕಾಳಜಿಯುಳ್ಳ ಕೆಲಸ ನೆರವೇರಿತು.
ಭರಮಸಾಗರ ವ್ಯಾಪ್ತಿಯ ಜನರು ತರಳಬಾಳು ಶ್ರೀಗಳಿಗೆ ಸದಾ ಋಣಿಯಾಗಿರಬೇಕು ಎಂದರು.
ನನ್ನ ಅವಧಿಯಲ್ಲಿ ಎಚ್.ಡಿ.ಪುರಕ್ಕೆ ಸಾಕಷ್ಟು ಜನಪರ ಕಾರ್ಯಗಳನ್ನು ಅನುಷ್ಟಾನ ಮಾಡಿದ್ದೇನೆ. ಇಲ್ಲಿನ ಜನರು ಸಮುದಾಯ ಭವನ ನಿರ್ಮಾಣಕ್ಕೆ ರು.50 ಲಕ್ಷ ಅನುದಾನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನಾನು ತಕ್ಷಣವೇ ರು.1 ಕೋಟಿ ಅನುದಾನ ಮಂಜೂರು ಮಾಡಿದೆ. ಹಾಗೆಯೇ 2.50ಕೋಟಿ ವೆಚ್ಚದ ಸರ್ಕಾರಿ ಆಸ್ಪತ್ರೆ, ರು.1 ಕೋಟಿ ಯಾತ್ರಿ ನಿವಾಸ ಮಂಜೂರು ಮಾಡಿಸಿದೆ.ಆದರೆ, ನನ್ನ ಕೆಲಸ ಕಾರ್ಯಗಳಿಗೆ ಜನರು ಮನ್ನಣೆ ನೀಡಲಿಲ್ಲ. ಅದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಜನರ ತೀರ್ಪನ್ನು ಸ್ವಾಗತಿಸಿದ್ದೇನೆ. ಇದೀಗ ಮತ್ತೆ ಜನರ ಬಳಿ ತೆರಳುತ್ತೇನೆ ಎಂದು ಹೇಳಿದರು.
ಭರಮಸಾಗರ ಏತ ನೀರಾವರಿ ಯೋಜನೆ ಅನುಷ್ಟಾನದ ರೀತಿಯಲ್ಲಿಯೇ ಸಾಸ್ವೇಹಳ್ಳಿ ನೀರಾವರಿ ಯೋಜನೆ ಅನುಷ್ಟಾನಕ್ಕೆ ತರಳಬಾಳು ಶ್ರೀಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಇಲ್ಲಿನ ಮಠಗಳೂ ಸಹ ರೈತರ ಕಲ್ಯಾಣಕ್ಕೆ ಸ್ಪಂದಿಸುವ ಕೆಲಸ ಸದಾ ಮಾಡುತ್ತಿವೆ ಎಂದರು.
ಸಾಣೇಹಳ್ಳಿ ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ನಿಷ್ಟುರತೆ, ನಿಷ್ಠೆ ಇದ್ದರೆ ಒಳ್ಳೆಯ ಕೆಲಸ ನಿರ್ಮಾಣ ಮಾಡಲು ಸಾಧ್ಯ. ಇಲ್ಲಿನ ಪ್ರದೇಶದಲ್ಲಿ ಸಮುದಾಯ ಭವನ ನಿರ್ಮಾಣದಿಂದ ಸುತ್ತಮುತ್ತಲಿನ ಜನರ ಶುಭಕಾರ್ಯಗಳನ್ನು ನೆರವೇರಿಸಲು ಉತ್ತಮ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಮಾಜಿ ಸಚಿವ ಎಚ್.ಆಂಜನೇಯ ಸೇರಿದಂತೆ ಇತರರು ಸಮುದಾಯ ಭವನ ನಿರ್ಮಾಣಕ್ಕೆ ಆರ್ಥಿಕ ವ್ಯವಸ್ಥೆ ಒದಗಿಸಿರುವುದು ಶ್ಲಾಘನೀಯ ಎಂದರು.
ಹೊಸದುರ್ಗ ಕುಂಚಗಿರಿ ಸುಕ್ಷೇತ್ರದ ಪೀಠಾಧ್ಯಕ್ಷ ಡಾ. ಶಾಂತವೀರ ಮಹಾಸ್ವಾಮೀಜಿ ಮಾತನಾಡಿ, ಮಠಗಳು ಮತ್ತು ಸಂಘಸಂಸ್ಥೆಗಳು ಸಮಾಜಮಖಿ ಕೆಲಸಗಳನ್ನು ಮಾಡಬೇಕು.ಸರ್ಕಾರವು ಜನರ ಕಲ್ಯಾಣಕ್ಕಾಗಿ ಕೋಟ್ಯಾಂತರ ರೂ ಖರ್ಚು ಮಾಡಿ ಹಲವು ಯೋಜನೆಗಳನ್ನು ಅನುಷ್ಟಾನಕ್ಕೆ ಮಾಡಿದ ವೇಳೆ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ, ಒಬ್ಬ ಶಾಸಕ ತಂದು ಅನುದಾನವನ್ನು ನಾನೇಕೆ ಅದನ್ನು ಮಾಡಬೇಕು ಎಂದು ಮತ್ತೊಬ್ಬ ಶಾಸಕ ನೆನೆಗುದಿಗೆ ತಳ್ಳುತ್ತಾರೆ. ಇಂಥಹ ಕೆಲಸ ಮಾಡಬಾರದು ಎಂದು ಹೇಳಿದರು.
ಇತ್ತೀಚಿನ ದಿನದ ರಾಜಕಾರಣದಲ್ಲಿ ರು. 1 ಸಾವಿರದ ಚೆಕ್ ನೀಡಿದರೂ ಸಹ ಪ್ರಚಾರ ಮಾಡಿಕೊಳ್ಳುತ್ತಾರೆ. ಆದರೆ, ಮಾಜಿ ಸಚಿವ ಎಚ್.ಆಂಜನೇಯ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅವರು ಬಹುತೇಕ ಇಂತಹ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡದೇ ಕೆಲಸ ಆರಂಭಿಸುತ್ತಿದ್ದರು. ಇದರ ಜತೆಗೆ ಅನೇಕ ಮಠಗಳಿಗೆ ಸಂಘ ಸಂಸ್ಥೆಗಳಿಗೆ ಅನುದಾನ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ, ಹೊಳಲ್ಕೆರೆ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಎಸ್‍ಎಲ್‍ಎನ್ ಟ್ರಸ್ಟ್ ಅಧ್ಯಕ್ಷ ಹೆಚ್.ಡಿ.ರಂಗಯ್ಯ, ಜಿಪಂ ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ ಮಾತನಾಡಿದರು.
ಎಚ್.ಡಿ.ಪುರ ಗ್ರಾಪಂ ಅಧ್ಯಕ್ಷೆ ದುಗ್ಗಮ್ಮ ನಾಗರಾಜ್, ಉಪಾಧ್ಯಕ್ಷ ಕೆ.ಟಿ. ಅಜ್ಜಪ್ಪ, ತಾಪಂ ಮಾಜಿ ಸದಸ್ಯರಾದ ಜಗದೀಶ್, ರಂಗಸ್ವಾಮಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ರಮೇಶ್, ಸಣ್ಣಸಿದ್ಧಪ್ಪ, ಮೂಡಲಗಿರಿಯಪ್ಪ, ಲಕ್ಷ್ಮಣಪ್ಪ, ಸಣ್ಣಸಿದ್ದಪ್ಪ, ಶೇಷಾದ್ರಿ, ಜಯಪ್ಪ, ಬಸವರಾಜ್, ಮಹಂತೇಶ್ ಶಂಕ್ರಮ್ಮ ಮತ್ತಿತರರಿದ್ದರು.