ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ದೆಹಲಿಯಲ್ಲಿ ಮೈತ್ರಿ ಮಾತುಕತೆ ನಡೆದಿದೆ. ರಾಜ್ಯದಲ್ಲೆಲ್ಲಾ ಮೈತ್ರಿಯದ್ದೇ ಚರ್ಚೆಯಾಗುತ್ತಿದೆ. ಇದರ ನಡುವೆ ಮೈತ್ರಿ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರೋಗ್ಯದ ಕಡೆಗೆ ಗಮನ ಕೊಡುವುದರ ಜೊತೆಗೆ ಮೈತ್ರಿಯ ಮಾತುಕತೆಯ ಕಡೆಗೂ ಗಮನ ನೀಡಿದ್ದೇನೆ. ಮೈತ್ರಿ ಕುರಿತ ಮಾತುಕತೆಗಳೆಲ್ಲಾ ಮಾತುಕತೆಯ ಹಂತದಲ್ಲಿವೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದ್ದೇನೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಸೀಟು ಹೊಂದಾಣಿಕೆಯ ಚರ್ಚೆಯಾಗಿಲ್ಲ ಎಂದಿದ್ದಾರೆ.

ಇನ್ನು ಬಿಎಸ್ ಯಡಿಯೂರಪ್ಪ ಅವರು ನಿನ್ನೆ ಮಾತಾಡಿದ್ದನ್ನು ಕೇಳಿಸಿಕೊಂಡೆ. ಪಕ್ಷದ ಬಗ್ಗೆ, ದೇವೇಗೌಡರ ಬಗ್ಗೆ ಹಾಗೂ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ಅವರು ಹೇಳಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಸೀಟು ಹೊಂದಾಣಿಕೆಯ ಚರ್ಚೆಯಾಗಿಲ್ಲ. ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್ ಹಠ ಹಿಡಿದಿದೆ. ಮಂಡ್ಯ ಸೀಟು ಏನಾಗುತ್ತದೆ..? ಅಲ್ಲಿನ ಸಂಸದರಿಗೆ ಏನಾಗುತ್ತದೆ..? ತುಮಕೂರು, ಕೋಲಾರ ಏನಾಗುತ್ತದೆ ಎಂಬುದ್ಯಾವುದು ಚರ್ಚೆಯೇ ಆಗಿಲ್ಲ. ಚರ್ಚೆನೆ ಆರಂಭಿಕ ಹಂತದಲ್ಲಿರುವಾಗ ಜನರಗೆ ತಪ್ಪು ಮಾಹಿತಿ ನೀಡಬಾರದು ಎಂದಿದ್ದಾರೆ.

