ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 08 : ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ.ವತಿಯಿಂದ ನಗರದ ಒನಕೆ ಓಬವ್ವ ವೃತ್ತದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ.ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ಯಾದವ್ ಮಾತನಾಡಿ ಮಳೆ ಅಭಾವದಿಂದಾಗಿ ರಾಜ್ಯದಲ್ಲಿ ಬರಗಾಲ ತಲೆದೋರಿದೆ. ವಿದ್ಯುತ್ ಸಮಸ್ಯೆಯಿಂದಸ ರೈತರ ಪಂಪ್ಸೆಟ್ಗಳಿಗೆ ಅನಿಯಮಿತ ಲೋಡ್ಶೆಡ್ಡಿಂಗ್ ಹೇರಲಾಗುತ್ತಿದೆ. ನಮ್ಮ ಸರ್ಕಾರ ಜಾರಿಗೆ ತಂದಿದ್ದ ರೈತಪರ ಯೋಜನೆಗಳನ್ನು ರದ್ದುಗೊಳಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ.
ಎಲ್ಲಾ ಜಲಾಶಯಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಹಗಲಿನಲ್ಲಿ ರೈತರ ಪಂಪ್ಸೆಟ್ಗಳಿಗೆ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂಸಿರಿ ಯೋಜನೆ, ಶ್ರಮಶಕ್ತಿ, ಎ.ಪಿ.ಎಂ.ಸಿ. ತಿದ್ದುಪಡಿ ಕಾಯಿದೆ ಎಲ್ಲವನ್ನು ಹಿಂದಕ್ಕೆ ಪಡೆದಿರುವುದರಿಂದ ಕೃಷಿಗಾಗಿ ಸಾಲ ಮಾಡಿರುವ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟದ ಸಭೆ ಕರೆದು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ನೆರವಿಗೆ ಧಾವಿಸಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು.
ಬಿಜೆಪಿ.ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ ಜಿ.ಎಸ್. ಜಿಲ್ಲಾ ಉಪಾಧ್ಯಕ್ಷೆ ಶ್ಯಾಮಲ ಶಿವಪ್ರಕಾಶ್, ಕಾರ್ಯದರ್ಶಿ ರೇಖ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ನಾಗರಾಜ್ಬೇದ್ರೆ, ನಂದಿನಾಗರಾಜ್, ನಗರಸಭೆ ಸದಸ್ಯ ಹರೀಶ್, ಶಿವಣ್ಣಾಚಾರ್, ಶಾಂತಮ್ಮ, ರಾಮು, ವೀರೇಶ್, ಶಂಭು, ಲೋಕೇಶ್, ಕಿರಣ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.