ಚಿತ್ರದುರ್ಗ, ಸೆ.04: ನಗರದ ಕವಾಡಿಗರಹಟ್ಟಿಯ ಮೂಲಸೌಕರ್ಯ ಅಭಿವೃದ್ಧಿಗೆ ನಗರಾಭಿವೃದ್ಧಿ ಇಲಾಖೆ ವತಿಯಿಂದ ರೂ.03 ಕೋಟಿ ಅನುದಾನ ಬಿಡುಗಡೆಗೆ ಜಿಲ್ಲಾಡಳಿತ ಪ್ರಸಾವನೆ ಸಲ್ಲಿಸಿದೆ. ಇದರೊಂದಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರೂ.1.3 ಕೋಟಿ ಅನುದಾನ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಹೇಳಿದರು.
ಕಲುಷಿತ ನೀರು ಸೇವನೆಯಿಂದ ತೊಂದರೆಗೆ ಒಳಗಾದ ಕವಾಡಿಗರಹಟ್ಟಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಘಟನೆ ಸಂಭವಿಸಿದ ತಕ್ಷಣ ಸಮಾಜ ಕಲ್ಯಾಣ ಆಯುಕ್ತರಿಗೆ ಸ್ಥಳಕ್ಕೆ ತೆರಳಿ ಅಗತ್ಯ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು,. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪತ್ರ ಬರೆದಿದ್ದೆ. ಕವಾಡಿಗರ ಹಟ್ಟಿಯಲ್ಲಿ ಕಲುಷಿತವಾದ ನೀರು ಸೇವನೆಯಿಂದ 7 ಜೀವಗಳು ಹೋಗಿವೆ.
ಮೇಲ್ನೋಟಕ್ಕೆ ಶುಚಿತ್ವ ಹಾಗೂ ಶುದ್ದ ನೀರು ಪೂರೈಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿರುವುದು ಎದ್ದು ಕಾಣಿಸುತ್ತಾ ಇದೆ. ವೈದ್ಯಕೀಯ ಪರೀಕ್ಷೆಯಲ್ಲಿ ಕಾಲರಾದಿಂದ ಮೃತಪಟ್ಟ ಕುರಿತು ತಿಳಿದು ಬಂದಿದೆ.
ಕುಡಿಯುವ ನೀರಿನ ಪೈಪ್ ಹಾಗೂ ಕಲುಷಿತ ನೀರಿನ ಪೈಪು ಹೊಡೆದು ನೀರು ಸೇರಿ ನೀರು ಕಲುಷಿತಗೊಂಡಿರುವ ಸಾಧ್ಯತೆ ಇದೆ. ಘಟನೆಯ ನಂತರ ಎಚ್ಚೆತ್ತು ಚರಂಡಿ ಹಾಗೂ ಪೈಪ್ ಲೈನ್‍ಗಳ ದುರಸ್ತಿ ಮಾಡಲಾಗಿದೆ.
ಹಟ್ಟಿಯಲ್ಲಿ ಆರ್.ಓ ಘಟಕ ತೆರದು ಶುದ್ದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಬಾಧಿತ ಪ್ರದೇಶದಲ್ಲಿ ವಾಸಿಸುವ ಎಲ್ಲರಿಗೂ ದವಸ ಧಾನ್ಯಗಳನ್ನು ವಿತರಿಸಲಾಗಿದೆ. ಸ್ಥಳದಲ್ಲಿ ತಾತ್ಕಾಲಿಕವಾಗಿ 24*7 ಚಿಕಿತ್ಸ ಕೇಂದ್ರ ಹಾಗೂ ಔಷಧಾಲಯಗಳನ್ನು ತೆರೆದು ವೈದ್ಯಕಿಯ ತಪಾಸಣೆ ಮಾಡಲಾಗುತ್ತಿದೆ. ಶುದ್ದ ಕುಡಿಯುವ ನೀರು ಹಾಗೂ ವಸತಿ ಸೇರಿದಂತೆ ಹೆಚ್ಚಿನ ಸೌಲಭ್ಯ ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ಈಗಾಗಲೇ ತಲಾ ಹತ್ತು ಲಕ್ಷ ಪರಿಹಾರ ಧನ ನೀಡಲಾಗಿದೆ. ಇಲ್ಲಿನ ಜನರು ಪರ್ಯಾಯ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವು ನೀಡಲಿದೆ ಎಂದರು.
ಕವಾಡಿಗರಹಟ್ಟಿಯ ಮೂಲಭೂತ ಸೌಕರ್ಯ, ಜನರ ಜೀವನೋಪಾಯಕ್ಕೆ, ವಸತಿ ಸೇರಿದಂತೆ ಪ್ರಮುಖವಾಗಿ 9 ಬೇಡಿಕೆಗಳನ್ನು ಜನರು ಸಲ್ಲಿಸಿದ್ದಾರೆ.
ಕಂದಾಯ ಇಲಾಖೆ ಜಾಗದಲ್ಲಿ ಮನೆಕಟ್ಟಿಕೊಂಡು ವಾಸಿಸುತ್ತಿರುವ ಜನರಿಗೆ ಆ ಜಾಗದ ಹಕ್ಕುಪತ್ರ ನೀಡಬೇಕು. ಇದರಿಂದ ಮನೆಗಳು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಮನೆ ತೆರವುಗೊಂಡರೆ ಪರಿಹಾರ ಲಭಿಸಲಿದೆ. ಹಾಗಾಗಿ ಅಕ್ರಮ ಸಕ್ರಮ ಯೋಜನೆಯಡಿ ಮನೆ ನಿರ್ಮಿಸಿಕೊಂಡವರಿಗೆ ಜಾಗದ ಹಕ್ಕು ನೀಡುವಂತೆ ಕೋರಿದ್ದಾರೆ. ಈ ಕುರಿತು ನಗರ ಸಭೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಮನವಿ ಪರಿಶೀಲಿಸುವಂತೆ ತಿಳಿಸಿದ್ದೇನೆ. ಇವುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಶಿಫಾರಸ್ಸು ಮಾಡಿ ಕಳುಹಿಸಕೊಡುವಂತೆ ಸೂಚನೆ ನೀಡಿದ್ದೇನೆ ಎಂದರು.
ಜನರ ಬೇಡಿಯನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ವಸತಿ ರಹಿತರಿಗೆ ಸೂಕ್ತ ವಸತಿ ಸೌಲಭ್ಯ ನೀಡಲು ಜಾಗ ಗುರುತಿಸಲಾಗುತ್ತಿದೆ. ಈಗಾಗಲೇ 3 ಎಕರೆ ಜಾಗ ಲಭ್ಯ ಇರುವ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿ 150 ಮನೆಗಳನ್ನು ನಿರ್ಮಿಸಬಹುದಾಗಿದೆ. ಅಕ್ರಮ ಸಕ್ರಮದ ಬೇಡಿಕೆ ಸರ್ಕಾರ ಮಟ್ಟದಲ್ಲಿ ನಿರ್ಧಾರವಾಗಬೇಕಾದ ವಿಷಯವಾಗಿದೆ. ಸರ್ಕಾರ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು. ವಿಳಂಬವಾಗದ ರೀತಿಯಲ್ಲಿ ಶೀಘ್ರವಾಗಿ ಇಲ್ಲಿನ ಜನರ ಸಮಸ್ಯೆ ಪರಿಹರಿಸಲಾಗುವುದು ಎಂದು ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಕವಾಡಿಗರಹಟ್ಟಿ ಕಲುಷಿತ ನೀರು ಪ್ರಕರಣ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರು ಸೋಮವಾರ ಕವಾಡಿಗರಹಟ್ಟಿಯಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ತಹಶೀಲ್ದಾರ್ ಡಾ.ನಾಗವೇಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಇದ್ದರು.