ಸುದ್ದಿಒನ್, ಚಿತ್ರದುರ್ಗ, ಸೆ.01 : ಶ್ರೀ ಗುರುರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ ಮುಖ್ಯ ದಿನವಾದ ಮಧ್ಯಾರಾಧನೆ (ಶ್ರಾವಣಮಾಸ ಕೃಷ್ಣಪಕ್ಷ ದ್ವಿತೀಯಾ) ದಿನಾಂಕ 1 ಸೆಪ್ಟೆಂಬರ್ 2023 ರಂದು ಚಿತ್ರದುರ್ಗದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ಮಠದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ನಿರ್ಮಾಲ್ಯ, ಅಷ್ಟೋತ್ತರ ಸಹಿತ ವಿಶೇಷ ಫಲ ಪಂಚಾಮೃತ ಅಭಿಷೇಕ, ಶ್ರೀ ಗುರುರಾಯರ ವೃಂದಾವನಕ್ಕೆ ವಿಶೇಷ ಪುಷ್ಪ ಅಲಂಕಾರ, ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ, ಮಧ್ಯಾಹ್ನ ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದಗಳು ನೆರವೇರಿದವು. ಸಾವಿರಾರು ಮಂದಿ ಭಕ್ತಾದಿಗಳು ಅನ್ನದಾನ ಪ್ರಸಾದ ಸ್ವೀಕರಿಸಿದರು.
ಈ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ಶ್ರೀ ಬ್ರಹ್ಮಚೈತನ್ಯ ಭಜನಾಮಂಡಳಿಯವರಿಂದ ಭಜನೆ, ಡಾ || ಶ್ರೀಮತಿ ನಂದಿನಿ ಶಿವಪ್ರಕಾಶ್ ರವರ ನೇತೃತ್ವದ ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರದವರಿಂದ ಭರತನಾಟ್ಯ ಕಾರ್ಯಕ್ರಮಗಳು ಜರುಗಿದುವು.
ತದನಂತರದಲ್ಲಿ ರಜತ ರಥೋತ್ಸವ, ಸ್ವಸ್ತಿವಾಚನ, ಅಷ್ಟಾವಧಾನ, ಮಹಾಮಂಗಳಾರತಿಯ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ಪುನೀತರಾದರು.
ಇಂದು ಸಂಜೆಯ ವಿಶೇಷ – “ಪ್ರಹ್ಲಾದವರದ ಶ್ರೀನರಸಿಂಹ ದೇವರ” ಸ್ಮರಣೆ ನಡೆಯಿತು.
ನಾಳೆ 2 ಸೆಪ್ಟೆಂಬರ್ ಉತ್ತರಾರಾಧನೆಯ ಕಾರ್ಯಕ್ರಮಗಳಲ್ಲಿ ಬೆಳಗ್ಗೆ ನಡೆಯುವ ರಥೋತ್ಸವ ಕಾರ್ಯಕ್ರಮದಲ್ಲಿಯೂ ಸಕಲ ಸದ್ಭಕ್ತರು ಪಾಲ್ಗೊಂಡು ಶ್ರೀ ಗುರುರಾಯರ ದರ್ಶನ, ಪ್ರಸಾದಾನುಗ್ರಹಗಳಿಗೆ ಭಾಜನರಾಗಬೇಕೆಂದು ಶ್ರೀಮಠದ ವ್ಯವಸ್ಥಾಪಕರಾದ ಪ್ರಾಣೇಶ್ ಕೊಪ್ಪರ್ ಅವರು ಹಾಗೂ ಗೌರವ ವಿಚಾರಣಕರ್ತರಾದ ಗೋವಿಂದಮೂರ್ತಿ ಅವರು ಸದ್ಭಕ್ತರಲ್ಲಿ ವಿನಂತಿಸಿದ್ದಾರೆ.