ಮಂಡ್ಯ: ಮಳೆ ಕೈ ಕೊಟ್ಟಂತೆಯೇ ಆಗಿದೆ. ಆಗಸ್ಟ್ ತಿಂಗಳು ಮುಗಿದರು ಇನ್ನು ಮಳೆ ಬರುವ ಸೂಚನೆಯೇ ಕಾಣುತ್ತಿಲ್ಲ. ರೈತರು ವರುಣ ದೇವರ ಮೇಲಿನ ನಂಬಿಕೆಯಿಂದ ಇನ್ನು ಕಾಯುತ್ತಿದ್ದಾರೆ. ಈಗ ಡ್ಯಾಂಗಳಲ್ಲಿ ಇರುವ ನೀರನ್ನಷ್ಟೇ ನಂಬಿಕೊಳ್ಳುವ ಪರಿಸ್ಥಿತಿ ಇದೆ. ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗಾಗಿ ಕಾವೇರಿ ನೀರು ಹರಿಸುತ್ತಿರುವುದನ್ನು ರೈತರು ಅಂದಿನಿಂದ ವಿರೋಧಿಸಿಕೊಂಡೆ ಬಂದಿದ್ದಾರೆ. ಇದೀಗ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಅಹೋರಾತ್ರಿ ಧರಣಿ ಕೂತಿದ್ದಾರೆ.
ಈಗಾಗಲೇ ಕೆ. ಆರ್. ಎಸ್. ನೀರಿನ ಮಟ್ಟ 100 ಅಡಿಗೆ ಇಳಿದಿದೆ. ತಮಿಳುನಾಡಿಗೆ ಕಾವೇರಿ ಪ್ರಾಧಿಕಾರ ಹೇಳಿದಂತೆ 15 ದಿನಗಳ ಕಾಲ ನೀರು ಹರಿಸಿದರೆ, ಕೆ. ಆರ್. ಎಸ್ ನಲ್ಲಿ 90 ಅಡಿಗೆ ಕುಸಿಯಲಿದೆ. ಕೋಟ್ಯಾಂತರ ಮಂದಿ ಕೃಷಿ ಮತ್ತು ಕುಡಿಯುವ ನೀರಿಗಾಗಿ ಕೆಆರ್ಎಸ್ ಅನ್ನೇ ನಂಬಿಕೊಂಡು ಕೂತಿದ್ದಾರೆ. ಹೀಗಿರುವಾಗ ಪ್ರತಿದಿನ ನೀರು ಹರಿಸಿದರೆ, ಡ್ಯಾಂ ಖಾಲಿಯಾಗುತ್ತದೆ ಎಂಬ ಆತಂಕ ಮನೆ ಮಾಡಿದೆ.
ಇನ್ನು ಧರಣಿ ಕೂತಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದ್ದು, ಹೀಗೆ ನೀರು ಹರಿಸಿದರೆ 15 ದಿನದಲ್ಲಿಯೇ ನೀರು ಖಾಲಿಯಾಗುತ್ತದೆ. ಪ್ರತಿಯೊಬ್ಬರು ಈ ಹೋರಾಟದಲ್ಲಿ ಭಾಗಿಯಾಗಿ, ಕುಡೊಯುವ ನೀರು ಉಳಿಸಿಕೊಳ್ಳಬೇಕಿದೆ. ಈಗಾಗಲೇ ನಾಟಿ ಮಾಡಿರುವ ಬೆಳೆಗೆ ನೀರು ಬೇಕಾಗಲಿದೆ. ಬೆಂಗಳೂರಿನ ಜನ ಮೊದಲು ಈ ಬಗ್ಗೆ ಎಚ್ಚರವಹಿಸಬೇಕಾಗಿದೆ. ಎರಡು ಕೋಟಿ ಜನ ಕಾವೇರಿ ನೀರನ್ನೇ ನಂಬಿಕೊಂಡಿದ್ದಾರೆ ಎಂದಿದ್ದಾರೆ.