ಉದ್ದಟತನ ಮೆರೆದ ಚೀನಾ : ಅರುಣಾಚಲ ಪ್ರದೇಶ ಮತ್ತು ಅಕ್ಸೈಚಿನ್ ನಮ್ಮವೇ ಎಂದು  ಹೊಸ ನಕ್ಷೆ ಬಿಡುಗಡೆ

 

 

ಸುದ್ದಿಒನ್ : ನೆರೆಯ ಚೀನಾ ಮತ್ತೊಮ್ಮೆ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿ ಉದ್ದಟತನವನ್ನು ಪ್ರದರ್ಶಿಸುವ ಮೂಲಕ ಪ್ರಚೋದನಕಾರಿ ಕ್ರಮಕ್ಕೆ ಮುಂದಾಗಿದೆ.
ಭಾರತದ ಕೆಲವು  ಭೂ ಪ್ರದೇಶಗಳನ್ನು ನಮ್ಮವೇ ಎಂದು ತೋರಿಸುವ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ.

ಸೋಮವಾರ ಬಿಡುಗಡೆಯಾದ ಅಧಿಕೃತ ನಕ್ಷೆಗಳಲ್ಲಿ, ಅರುಣಾಚಲ ಪ್ರದೇಶ ಮತ್ತು ಅಕ್ಸೈಚಿನ್ ಪ್ರದೇಶಗಳನ್ನು ಚೀನಾದ ಪ್ರದೇಶಗಳೆಂದು ಘೋಷಿಸಲಾಗಿದೆ. ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಭೇಟಿಯಾದ ನಾಲ್ಕು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ ಎಂಬುದು ಗಮನಾರ್ಹ.

ಚೀನಾದ ನೈಸರ್ಗಿಕ ಸಂಪನ್ಮೂಲಗಳ ಇಲಾಖೆಯು ಈ ನಕ್ಷೆಯನ್ನು ‘2023 ಆವೃತ್ತಿಯ ಸ್ಟ್ಯಾಂಡರ್ಡ್ ಮ್ಯಾಪ್ ಆಫ್ ಚೀನಾ’ ಎಂಬ ಹೆಸರಿನಲ್ಲಿ ರಚಿಸಿದೆ. ಡಿಜಿಟಲ್ ಮತ್ತು ನ್ಯಾವಿಗೇಷನ್ ನಕ್ಷೆಗಳನ್ನೂ ಬಿಡುಗಡೆ ಮಾಡಲಾಗುತ್ತಿದೆ ಎಂದು ಡ್ರ್ಯಾಗನ್ ನ ಅಧಿಕೃತ ಮಾಧ್ಯಮ ಗ್ಲೋಬಲ್ ಟೈಮ್ಸ್ ಹೇಳಿದೆ.

ಚೀನಾ ಸ್ಟ್ಯಾಂಡರ್ಡ್ ಮ್ಯಾಪ್ 2023 ಆವೃತ್ತಿಯನ್ನು ಸೋಮವಾರ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ರಚಿಸಿರುವ ಈ ಪ್ರಮಾಣಿತ ನಕ್ಷೆ ಸೇವಾ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದೆ’ ಎಂದು ಅದು ಟ್ವೀಟ್ ಮಾಡಿದೆ.

‘ಈ ನಕ್ಷೆಯು ಚೀನಾದ ರಾಷ್ಟ್ರೀಯ ಗಡಿಗಳು, ಪ್ರಪಂಚದ ವಿವಿಧ ದೇಶಗಳ ರೇಖಾಚಿತ್ರ ವಿಧಾನವನ್ನು ಆಧರಿಸಿದೆ’ ಎಂದು ತಿಳಿಸಿದೆ. ಈ ನಕ್ಷೆಯನ್ನು ಚೀನಾದ ಗಡಿಗಳು ಮತ್ತು ಅದರ ಪ್ರದೇಶಗಳನ್ನು ತೋರಿಸಿದರೆ, ಇದು ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಸೈಚಿನ್ ಪ್ರದೇಶಗಳನ್ನು ತನ್ನ ಪ್ರಾಂತ್ಯಗಳಾಗಿ ತೋರಿಸಿದೆ. ಈ ಹಿಂದೆ ಬಿಡುಗಡೆ ಮಾಡಲಾದ ನಕ್ಷೆಯಲ್ಲಿ, ತೈವಾನ್ ಮತ್ತು ಸಂಪೂರ್ಣ ದಕ್ಷಿಣ ಚೀನಾ ಸಮುದ್ರವು ತಮ್ಮದು ಎಂದು ಹೇಳಲಾಗಿದೆ. ಇತ್ತೀಚಿನ ಆವೃತ್ತಿಯಲ್ಲಿ ಅರುಣಾಚಲ ಪ್ರದೇಶದ 11 ಪ್ರದೇಶಗಳ ಹೆಸರನ್ನು ಪ್ರಮಾಣೀಕರಿಸಿ ನಕ್ಷೆಯನ್ನು ರಚಿಸಲಾಗಿದೆ ಎಂಬುದು ಗಮನಾರ್ಹ.

ಅರುಣಾಚಲದಲ್ಲಿ ಚೀನಾದ ಹೆಸರುಗಳನ್ನು ಸೂಚಿಸುವ ಡ್ರ್ಯಾಗನ್ ನಕ್ಷೆಗಳನ್ನು ಬಿಡುಗಡೆ ಮಾಡಿರುವುದು ಇದು ಮೂರನೇ ಬಾರಿ. ಈ ವರ್ಷದ ಏಪ್ರಿಲ್‌ನಲ್ಲಿ, ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶದ 11 ಪ್ರದೇಶಗಳ ಹೆಸರನ್ನು ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಭಾಷೆಗಳಲ್ಲಿ ಅನುಮೋದಿಸಿತು.

2017 ರಲ್ಲಿ ಮೊದಲ ಬಾರಿಗೆ, ಚೀನಾ ಆರು ಪ್ರದೇಶಗಳ ಹೆಸರನ್ನು ಬದಲಾಯಿಸಿತು. ಅದರ ನಂತರ ಡಿಸೆಂಬರ್ 2021 ರಲ್ಲಿ ಅದು ಇನ್ನೂ 21 ಸ್ಥಳಗಳಿಗೆ ಹೊಸ ಹೆಸರುಗಳನ್ನು ನೀಡಿತು.

ಅರುಣಾಚಲ ಪ್ರದೇಶದ ಒಂದು ಭಾಗವನ್ನು ಚೀನಾ ತನ್ನದು ಎಂದು ಹೇಳಿಕೊಂಡಿದೆ. ಹೆಸರು ಬದಲಾವಣೆಯನ್ನು ಚೀನಾ ತನ್ನ ಹಕ್ಕುಗಳನ್ನು ಬಲಪಡಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಆದರೆ, ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಕೇಂದ್ರ ಹಲವು ಬಾರಿ ಸ್ಪಷ್ಟಪಡಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಜಿ20 ಸಮ್ಮೇಳನ ನಡೆಯಲಿದ್ದು, ಭೂಪಟದ ವಿಚಾರದಲ್ಲಿ ಭಾರತ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಕಳೆದ ವರ್ಷ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ದೇಶದ ಗಡಿಗಳ ನಿರ್ವಹಣೆಗಾಗಿ ನಿರ್ದಿಷ್ಟವಾಗಿ ಗಡಿ ಕಾನೂನನ್ನು ಜಾರಿಗೆ ತಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *