ಚಿತ್ರದುರ್ಗ ವೈದ್ಯಕೀಯ ಕಾಲೇಜು ಜಿಲ್ಲಾ ಆಸ್ಪತ್ರೆ ಪ್ರದೇಶದಲ್ಲಿ ನಿರ್ಮಾಣ ಮಾಡುವುದು ದುರಂತ :ಡಾ.ಪಿ.ಟಿ. ವಿಜಯಕುಮಾರ್

2 Min Read

ವರದಿ ಮತ್ತು ಫೋಟೋ ಕೃಪೆ
                     ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್,ಚಿತ್ರದುರ್ಗ, (ಆ.27) : ಮುಂದಿನ ಪೀಳಿಗೆಯನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ಚಿತ್ರದುರ್ಗ ಹೊರವಲಯದ ವಿಶಾಲವಾದ ಪ್ರದೇಶದಲ್ಲಿ ಸುಸಜ್ಜಿತ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಪಿ.ಟಿ. ವಿಜಯಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರದ ಐಎಂಎ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಜನರ ಬಹುದಿನದ ಕನಸ್ಸಾಗಿರುವ ವೈದ್ಯಕೀಯ ಕಾಲೇಜನ್ನು ಸರ್ಕಾರ ನಿರ್ಮಾಣ ಮಾಡಲು ಹೊರಟಿರುವುದು ನಮಗೆಲ್ಲ ಸಂತೋಷದ ಸಂಗತಿ.

ಆದರೆ ಕಾಲೇಜನ್ನು ಈಗಿನ ಜಿಲ್ಲಾ ಆಸ್ಪತ್ರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ಹೊರಟಿರುವುದು ದುರಂತದ ಸಂಗತಿಯಾಗಿದೆ. ಜಿಲ್ಲಾ ಆಸ್ಪತ್ರೆಗೆ ಪ್ರತಿನಿತ್ಯ 6 ತಾಲ್ಲೂಕುಗಳ ಹಳ್ಳಿಗಳಿಂದ ಸಾವಿರಾರು ಜನರು ಚಿಕಿತ್ಸೆಗಾಗಿ ಬಂದು ಹೋಗುತ್ತಿದ್ದು, ಈ ಪ್ರದೇಶದಲ್ಲಿ ಹೆಚ್ಚಿನ ಜನಸಂದಾಣಿಯಾಗಿ ವಾಹನಗಳ ಸಂಚಾರ ಬಹಳಷ್ಟಿರುತ್ತದೆ. ಇದರ ಜೊತೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗಳು ಸೇರಿದರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಬಹಳಷ್ಟು ತೊಂದರೆ ಆಗಲಿದೆ. ಅಲ್ಲದೆ ವಾಹನಗಳ ಓಡಾಟವೇ ತೀವ್ರ ಅಸ್ತವ್ಯಸ್ತ ಆಗಲಿದೆ ಆದ್ದರಿಂದ ಆಸ್ಪತ್ರೆಯನ್ನು ಮಾತ್ರ ಇಲ್ಲಿ ನಿರ್ಮಾಣ ಮಾಡಿ ಕಾಲೇಜನ್ನು ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಆಸ್ಪತ್ರೆ ಸುತ್ತಮುತ್ತಲು ಈಗಿರುವ ರಕ್ತ ನಿಧಿ ಕೇಂದ್ರ, ಆರ್ ಓ ಪ್ಲಾಂಟ್, ಡಯಾಲಿಸಿಸ್ ಕೇಂದ್ರಗಳು ಇದ್ದು, ಕಾಲೇಜು ನಿರ್ಮಾಣ ಮಾಡಬೇಕಾದರೆ ಈಗಿರುವ ಸುಸಜ್ಜಿತ ಕಟ್ಟಡಗಳನ್ನು ಧ್ವಂಸ ಮಾಡಬೇಕಾಗುತ್ತದೆ. ಇದು ಅನವಶ್ಯಕವಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಲಿದೆ ಎಂದು ಜನರ ತೆರಿಗೆಯ ಹಣವನ್ನು ಏಕೆ ಹಾಳು ಮಾಡಬೇಕು. ಅಲ್ಲದೆ ನಮ್ಮ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ನಗರದ ಹೊರವಲಯದಲ್ಲಿ ಕಾಲೇಜು ನಿರ್ಮಾಣ ಮಾಡಿದರೆ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಸಿಗಲಿದೆ, ಆಟದ ಮೈದಾನ ಮಾಡಿದರೆ ಕಲಿಕೆಯ ಜೊತೆ ವಿದ್ಯಾರ್ಥಿಗಳು ದೈಹಿಕವಾಗಿ ಸದೃಡರಾಗಿರಲು ಅನುಕೂಲ ಆಗಲಿದೆ ಎಂದರು.

ಇಲ್ಲಿನ ಜಿಲ್ಲಾ ಆಸ್ಪತ್ರೆ ಸ್ಥಳವು ಸದ್ಯ ನ್ಯಾಯಾಲಯದಲ್ಲಿರುವುದರಿಂದ ಇಲ್ಲಿ ಕಾಲೇಜು ನಿರ್ಮಾಣ ಸರಿ ಇರುವುದಿಲ್ಲ ಎಂದು ಹೇಳಿದ ಅವರು ಒಂದು ವೇಳೆ ಇಲ್ಲಿಯೇ ಕಾಲೇಜು ನಿರ್ಮಾಣ ಮಾಡಿದರೆ ನಾವು ಇದರ ವಿರುದ್ದ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಎಚ್ಚರಿಸಿ ಇದರ ಬಗ್ಗೆ ಮುಖ್ಯಮಂತ್ರಿಗಳನ್ನು ಕಂಡು ಬೇಟಿ ಇರುವ ಸಮಸ್ಯೆಯನ್ನು ವಿವರಿಸುವುದಾಗಿ ವಿಜಯಕುಮಾರ್ ತಿಳಿಸಿ ಆಸ್ಪತ್ರೆಯ ಕಟ್ಟಡವನ್ನು ಮಾತ್ರ ಇಲ್ಲಿ ನಿರ್ಮಾಣ ಮಾಡಿ, ಹೊರವಲಯದಲ್ಲಿ ಕಾಲೇಜು ನಿರ್ಮಾಣ ಮಾಡಿದರೆ ನಗರದ ಬೆಳವಣಿಗೆಗೆ ಅನುಕೂಲ ಆಗಲಿದೆ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಡಾ ಕೃಷ್ಣಮೂರ್ತಿ, ಬಸವರಾಜ್, ಡಾ.ಜಿ.ಟಿ.ತಿಪ್ಪಾರೆಡ್ಡಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *