ಬೆಂಗಳೂರು: ಇಸ್ರೋ ವಿಜ್ಞಾನಿಗಳು ಇಂದು ಇಡೀ ಭಾರತೀಯರು ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾರೆ. ಚಂದ್ರನಲ್ಲಿ ಭಾರತದ ಗುರುತನ್ನು ನಿರ್ಮಿಸಿದ್ದಾರೆ. ಇಡೀ ದೇಶವೇ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದೆ. ರಾಜ್ಯ ಸರ್ಕಾರದ ಸಿಎಂ, ಡಿಸಿಎಂ ಸೇರಿದಂತೆ ಈಗಾಗಲೇ ಎಲ್ಲರು ಅಭಿನಂದಿಸಿದ್ದಾರೆ. ಇದೀಗ ಪ್ರಧಾನಿ ಮೋದಿ ಬೆಂಗಳೂರಿಗೆ ಬರಲು ದಿನಾಂಕ ನಿಗದಿಯಾಗಿದೆ.
ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಶನಿವಾರದಂದು ಬೆಂಗಳೂರಿಗೆ ಬರಲಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿರು ಇಸ್ರೋಗೆ ಭೇಟಿ ನೀಡಿ, ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ದಕ್ಷಿಣ ಆಫ್ರಿಕಾದ ಶೃಂಗಸಭೆಯಿಂದ ಪ್ರಧಾನಿ ಮೋದಿ ಅವರು ನೇರ ಬೆಂಗಳೂರಿಗೆ ಬರಲಿದ್ದಾರೆ.
ಪ್ರಧಾನಿ ಮೋದಿ ಬೆಂಗಳೂರಿಗೆ ಬರುವುದೇ ಅಪರೂಪ. ಸದ್ಯಕ್ಕೆ ಲೋಕಸಭಾ ಚುನಾವಣೆ ಬೇರಡ ಹತ್ತಿರವಿದೆ. ಹೀಗಾಗಿ ಪ್ರಧಾನಿ ಮೋದಿ ಬಂದಾಗ ಬಿಜೆಪಿ ನಾಯಕರು ರೋಡ್ ಶೋ ಮಾಡುವುದಕ್ಕೂ ಸಿದ್ಧತೆ ನಡೆಸಿಕೊಂಡಿದ್ದಾರೆ. ಏರ್ಪೋರ್ಟ್ ನಲ್ಲಿಯೇ ಸ್ವಾಗತ ಕೋರುವುದಕ್ಕೆ ಐದಾರು ಸಾವುರ ಜನರನ್ನು ಸೇರಿಸುವ ಉದ್ದೇಶ ಹೊಂದಿದ್ದಾರೆ. ಪೀಣ್ಯದಲ್ಲಿ ಮೋದಿ ಅವರು ಸುಮಾರು 1 ಕಿಲೋಮೀಟರ್ ರೋಡ್ಶೋ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಬೆಂಗಳೂರಿನ ಬಿಜೆಪಿ ಶಾಸಕರಿಗೆ ಕೂಡ ಸೂಚನೆ ನೀಡಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.