ಕೊಪ್ಪಳ: ಲೋಕಸಭಾ ಚುನಾವಣೆಗೆ ಬಿಜೆಪಿಯಲ್ಲಿರುವವರು ಕಾಂಗ್ರೆಸ್ ಮರಳುತ್ತಾರೆ ಎಂಬ ವಿಚಾರ ಬಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ಒಬ್ಬೊಬ್ಬರೇ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ಕೊಪ್ಪಳ ಸಂಸದ ಸಂಗಣ್ಣ ಕರಡಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕಾಂಗ್ರೆಸ್ ಹೋಗಲ್ಲ ಅನ್ನೋದನ್ನ ರಕ್ತದಲ್ಲಿ ಬರೆದುಕೊಡಬೇಕಾ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ನಾನು ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಪಕ್ಷದಿಂದ ಟಿಕೆಟ್ ಸಿಗದೆ ಇದ್ದರೂ, ಪಕ್ಷ ನಿರ್ಧರಿಸಿದ, ಸೂಚಿಸಿದ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇನೆ. ಕುಷ್ಟಗಿ ಶಾಸಕ ದೊಡ್ಡನಗೌಡ ಸೇರಿದಂತೆ ಇತರರು ಬಿಜೆಪಿ ಬಿಡುವ ಯೋಚನೆಯಿಲ್ಲ. ಸದ್ಯಕ್ಕೆ ಬಿಜೆಪಿಗೆ ಕೊಂಚ ಹಿನ್ನಡೆಯಾಗಿದೆ. ಆದ್ರೆ ಪಕ್ಷ ಸಂಘಟನೆ ಬಗ್ಗೆ ಗಮನಹರಿಸಲಿದ್ದಾರೆ.
ಮಾಧ್ಯಮದವರು ಮತ್ತೊಮ್ಮೆ ಈ ರೀತಿಯ ಪ್ರಶ್ನೆಗಳನ್ನು ಕೇಳಬಾರದು ಎಂಬ ಕಾರಣಕ್ಕೆ ಹೇಳುತ್ತಾ ಇದ್ದೇನೆ. ಬಿಜೆಪಿ ಬಿಡುವ ಯೋಚನೆಯಿಲ್ಲ. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲದ ಹಿನ್ನಡೆಯಾಗುತ್ತಾ ಇರುತ್ತದೆ. ಶೀಘ್ರವೇ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳುವ ಮೂಲಕಕಾಂಗ್ರೆಸ್ ಪಕ್ಷಕ್ಕೆ ಹೋಗುವ ಯಾವುದೇ ಯೋಚನೆ ಇಲ್ಲ ಎಂಬುದಾಗಿ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.