ಬೆಂಗಳೂರು: ರಾಜ್ಯ ಸರ್ಕಾರ ಸದ್ಯ ಎನ್ಇಪಿ ನೀತಿಯನ್ನು ತೆಗೆದು ಹಾಕುವ ನಿರ್ಧಾರಕ್ಕೆ ಬಂದಿದೆ. ಈ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಶಿಕ್ಷಣ ಎಂದರೆ ಕೇವಲ ಓದು ಬರಹ ಕಲಿಯುವುದಲ್ಲ. ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸುವಂತ ಶಿಕ್ಷಣ ನೀಡಬೇಕು ಎಂದಿದ್ದಾರೆ.
ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣವನ್ನು, ಜ್ಞಾನವನ್ನು ಮಕ್ಕಳಿಗೆ ನೀಡಬೇಕು. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಲೋಪವಾಗಬಾರದು. ಪದವೀಧರ ಯುವಕ – ಯುವತಿಯರು ಯಾವುದೇ ಜಾತಿ, ಧರ್ಮ, ಭಾಷೆಗಳಿಗೆ ಪ್ರಭಾವಿತವಾಗಬಾರ್ಉ. ಬೇರೆ ಬೇರೆ ಭಾಷೆ, ಸಂಸ್ಕೃತಿ ಇರುವ ಕಾರಣ ನಮ್ಮ ದೇಶದಲ್ಲಿ ಏಕ ಶಿಕ್ಷಣ ಪದ್ಧತಿ ಸಾಧ್ಯವಾಗದು. ಮಕ್ಕಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ನೀತಿಯನ್ನು ಪುನರ್ ಪರಿಶೀಲನೆ ನಡೆಸುತ್ತಿದ್ದೇವೆ. ಸಮ ಸಮಾಜ ಪರಿಸ್ಥಿತಿ ನಿರ್ಮಾಣ ಮಾಡುವ ಸಾಮರ್ಥ್ಯವನ್ನು ವಿವಿಗಳಿಗೆ ನೀಡಬೇಕು.
ರಾಜಕೀಯ, ಪ್ರಜಾಪ್ರಭುತ್ವ, ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲಿದ್ದಾಗ ಮಾತ್ರ ದೇಶದಲ್ಲಿ ಸಮಾನತೆ ಸಾಧ್ಯ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಅಧ್ಯಯನ ಮತ್ತು ಸಂಶೋಧನೆಗಳು ಗ್ರಂಥಾಲಯಗಳಲ್ಲಿ ಕೊಳೆಯಬಾರದು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಜೊತೆ ರಾಜಿ ಮಾಡಿಕೊಂಡು ಹೋಗುವುದಾದರೆ ಅದು ಶಿಕ್ಷಣವೇ ಅಲ್ಲ. ಒಬ್ಬ ವ್ಯಕ್ತಿ ವಿವಿಯಿಂದ ಹೊರಗೆ ಬಂದ ಮೇಲೆ ಸಮಾಜದ ಜವಾಬ್ದಾರಿ ಹೊರುವ ಶಕ್ತಿ ಇರಬೇಕು ಎಂದಿದ್ದಾರೆ.