ಚಿಕ್ಕಮಗಳೂರು: ರಾಜ್ಯದ ಅದೆಷ್ಟೋ ಹಳ್ಳಿಗಳು ಈಗಲೂ ಮೂಲಭೂತ ಸೌಲಭ್ಯವಿಲ್ಲದೆ ಒದ್ದಾಡುತ್ತಿವೆ. ರಸ್ತೆ ಇಲ್ಲ, ನೀರಿಲ್ಲ, ಕರೆಂಟ್ ಕೂಡ ಇರಲ್ಲ. ಇಂಥ ಹಳ್ಳಿಗಳಿಗೆ ಅಲ್ಲಿನ ಸ್ಥಳೀಯ ನಾಯಕರು ಮುತುವರ್ಜಿವಹಿಸಿ ಬಗೆಹರಿಸಬೇಕಾಗುತ್ತದೆ. ಆದ್ರೆ ಚಿಕ್ಕಮಗಳೂರಿನ ಹಳ್ಳಿಯೊಂದರ ಉದ್ಧಾರಕ್ಕೆ ಪ್ರಧಾನಿ ಮೋದಿಯವರೇ ಸ್ವತಃ ಕರೆ ಮಾಡಲಿದ್ದಾರಂತೆ. ಅಷ್ಟಕ್ಕೂ ಆ ಹಳ್ಳಿಗೆ ಏನಾಗಿದೆ ಎಂಬ ಡಿಟೈಲ್ ಇಲ್ಲಿದೆ.
ಜಿಲ್ಲೆಯ ಕಳಸ ತಾಲೂಕಿನಲ್ಲಿ ಕುಂಬಳಡಿಕೆ ಎಂಬ ಗ್ರಾಮವಿದೆ. ಆ ಗ್ರಾಮದ ಜನ ಹಲವು ವರ್ಷಗಳಿಂದ ಮೂಲ ಸೌಕರ್ಯ ವಂಚಿತರಾಗಿದ್ದಾರೆ. ಸ್ವಂತವಾದ ಮನೆಗಳಿಲ್ಲ, ಕರೆಂಟ್ ಇಲ್ಲ, ಶಿಕ್ಷಣವಂತು ಮೊದಲೇ ಇಲ್ಲ. ಸ್ಥಳೀಯ ನಾಯಕರು ಎಲ್ಲವನ್ನು ಸರಿ ಮಾಡುತ್ತಾರೆ ಎಂದೇ ನೋಡುತ್ತಿದ್ದರು. ಮನವಿಯನ್ನು ಮಾಡಿದ್ದರು. ಆದ್ರೆ ಸ್ಥಳೀಯ ನಾಯಕರಿಂದ ಕೆಲಸವೇ ಆಗದೆ ಇದ್ದಾಗ, ಇದೀಗ ಪ್ರಧಾನಿ ಮೋದಿಯವರ ಕಚೇರಿಯಿಂದಾನೇ ಕರೆ ಬಂದಿದೆ.
ಸಮಸ್ಯೆ ಬಗ್ಗೆ ಜನ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು. ಪ್ರಧಾನಿ ಕಾರ್ಯಾಲಯದಿಂದಾನೇ ಕರೆ ಬಂದಿದ್ದು, ಇನ್ನು ಮೂರು ದಿನದಲ್ಲಿ ಮೋದಿಯವರೇ ಖುದ್ದು ಫೋನ್ ಮೂಲಕ ಸಮಸ್ಯೆ ಆಲಿಸಲಿದ್ದಾರೆ. ಈ ಗ್ರಾಮದಲ್ಲಿ ಇರೋರೆಲ್ಲರೂ ಕೂಲಿ ಕಾರ್ಮಿಕರೇ. ನಿರಾಶ್ರಿತರು ಅಂತಾ ಜಾಗವನ್ನು ನೀಡಲಾಗಿದೆ. ಮಕ್ಕಳು ಶಿಕ್ಷಣಕ್ಕೂ ಪರದಾಡ್ತಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ರೂ ಪ್ರಯೋಜವಾಗದೇ ಕೊನೆಗೆ ಪ್ರದಾನಿ ಮೋದಿಗೆ ಪತ್ರ ಬರೆದು ನೋವು ತೋಡಿಕೊಂಡಿದ್ದಾರೆ.