ಸುದ್ದಿಒನ್, ಚಿತ್ರದುರ್ಗ, ಆ.18 : ಜಿಲ್ಲೆಯ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆಯ ಯೋಜನೆಗಾಗಿ 5,300 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವ ಹಿನ್ನೆಲೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಕುಮಾರ ಕೃಪಾದಲ್ಲಿ ಭೇಟಿಯಾಗಿ ಈ ಕುರಿತು ಚರ್ಚಿಸಿದ್ದಾರೆ.
ತರೀಕೆರೆ ಹತ್ತಿರದ ವೈ ಜಂಕ್ಷನ್, ಅಬ್ಬಿನಹೊಳಲು ಹತ್ತಿರ ನಡೆಯುತ್ತಿರುವ ಕಾಮಗಾರಿಗಳಿಗೆ ಬಗ್ಗೆ ಚರ್ಚಿಸಿದರು. ಇದಕ್ಕೆ ಸಂಬಂಧಿಸಿದಂತೆ ತರೀಕೆರೆ ಶಾಸಕ ಶ್ರೀನಿವಾಸ್ ರವರಿಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರವರು ಕರೆ ಮಾಡಿ ಕೇಂದ್ರ ಸಚಿವ ನಾರಾಯಣಸ್ವಾಮಿ ರವರ ಸಹಕಾರದೊಂದಿಗೆ ಅಬ್ಬಿನಹೊಳಲು ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವ ಜವಾಬ್ದಾರಿವಹಿಸಿ, ಕಾಮಗಾರಿಯ ಪ್ರಗತಿಯ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಪಾವಗಡ ತಾಲ್ಲೂಕಿನ ಕುಡಿಯುವ ನೀರು ಹಾಗೂ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಯ ಸಪೋರ್ಟ್ ಫಾರ್ ಮಾಡ್ರನೈಸೇಷನ್ ಪ್ರೋಗ್ರಾಮ್(SSIMP) ಯೋಜನೆ ಅಡಿಯಲ್ಲಿ ಜಿಲ್ಲೆಯ ವಾಣಿ ವಿಲಾಸ ಸಾಗರ ಜಲಾಶಯದ ಅಣೆಕಟ್ಟು ಅಭಿವೃದ್ಧಿಗೆ 720 ಕೋಟಿ ಹಣ ಬಿಡುಗಡೆಯಾಗಿದ್ದು ಅದನ್ನು ತ್ವರಿತ ಗತಿಯಲ್ಲಿ ಮುಗಿಸಲು ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ ಕೆ ಶಿವಕುಮಾರ ರವರ ಸಹಕಾರ ನೀಡುವಂತೆ ಚರ್ಚಿಸಲಾಗಿದೆ. ಈ ವೇಳೆ ಸಣ್ಣಚಿತ್ತಯ್ಯ, VJNL ವ್ಯವಸ್ಥಾಪಕ ನಿರ್ದೇಶಕರು, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.