ಗ್ರಾಹಕರು ಮತ್ತು ಉದ್ಯೋಗಿಗಳಿಂದ ಬ್ಯಾಂಕ್ ಕಿಕ್ಕಿರಿದು ತುಂಬಿತ್ತು. ಅಷ್ಟರಲ್ಲಿ ದುಷ್ಕರ್ಮಿಗಳು ಮಾಸ್ಕ್ ಧರಿಸಿ ಬಂದೂಕು ಹಿಡಿದು ಒಳ ಪ್ರವೇಶಿಸಿದ್ದಾರೆ. ಅಲ್ಲಿದ್ದ ಬ್ಯಾಂಕ್ ಸಿಬ್ಬಂದಿಗೆ ಆಯುಧಗಳಿಂದ ಬೆದರಿಸಿ ಹಣ ತೆಗೆದುಕೊಂಡು ತಕ್ಷಣ ಅಲ್ಲಿಂದ ಓಡಿ ಹೋಗಿದ್ದಾರೆ. ಇದು ಸಿನಿಮಾದ ಕಥೆಯಲ್ಲ. ಇದು ನಿಜವಾಗಿ ನಡೆದ ಘಟನೆ.
#Surat | સુરતમાં બેન્કમાંથી 13 લાખની લૂંટના CCTV આવ્યા સામે#Surat #robbery #BankofMaharashtra #robber #CCTV #RitamNews #CCTVFootage pic.twitter.com/X52ii5yufg
— Ritam Gujarati (@RitamappG) August 11, 2023
ಶಸ್ತ್ರಸಜ್ಜಿತ ದರೋಡೆಕೋರರು ಹಗಲು ಹೊತ್ತಿನಲ್ಲಿ ಕಿಕ್ಕಿರಿದ ಬ್ಯಾಂಕ್‌ಗೆ ನುಗ್ಗಿ ಹಣ ದೋಚಿದ್ದಾರೆ. ಇದರಿಂದ ಅಲ್ಲಿದ್ದ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ದಾಳಿಕೋರರು ಹೋದ ನಂತರ ಬ್ಯಾಂಕ್ ಉದ್ಯೋಗಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಗುಜರಾತ್ ನಲ್ಲಿ ನಡೆದಿದೆ. ಇಡೀ ದರೋಡೆ ಘಟನೆ ಬ್ಯಾಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಇದೀಗ ಆ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.
ಗುಜರಾತ್‌ನ ಸೂರತ್‌ನಲ್ಲಿ ಲೂಟಿಕೋರರು ಅಟ್ಟಹಾಸ ಮೆರೆದಿದ್ದಾರೆ. ಹಗಲು ಹೊತ್ತಿನಲ್ಲಿ ಎಲ್ಲರೂ ನೋಡುತ್ತಿರುವಾಗಲೇ ಬ್ಯಾಂಕ್‌ಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸೂರತ್‌ನ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯಲ್ಲಿ ಈ ದರೋಡೆ ಘಟನೆ ನಡೆದಿದೆ. ಐವರು ದುಷ್ಕರ್ಮಿಗಳು 2 ಬೈಕ್‌ಗಳಲ್ಲಿ ಬಂದು ಸಾಮಾನ್ಯ ಗ್ರಾಹಕರಂತೆ ನೇರವಾಗಿ ಬ್ಯಾಂಕ್‌ಗೆ ನುಗ್ಗಿದ್ದಾರೆ. ಅವರು ತಕ್ಷಣವೇ ತಮ್ಮ ಬಂದೂಕುಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಅಲ್ಲಿದ್ದ ಬ್ಯಾಂಕ್ ನೌಕರರು ಮತ್ತು ಗ್ರಾಹಕರಿಗೆ ಬೆದರಿಕೆ ಹಾಕಿದ್ದಾರೆ.
ಬ್ಯಾಂಕ್ ಸಿಬ್ಬಂದಿಗೆ ಬೆದರಿಸಿ ತಾವು ತಂದಿದ್ದ ಬ್ಯಾಗ್ ಗಳಲ್ಲಿ ಹಣ ತುಂಬುವಂತೆ ಹೇಳಿದ್ದಾರೆ. ಬ್ಯಾಗ್ ತುಂಬಿದ ಬಳಿಕ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರನ್ನು ಅಲ್ಲಿದ್ದ ಒಂದು ಕೊಠಡಿಗೆ ಕಳುಹಿಸಿ ಹೊರಗಿನಿಂದ ಬೀಗ ಹಾಕಿದ್ದಾರೆ. ಬಳಿಕ ಹಣ ತುಂಬಿದ ಚೀಲಗಳನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಎಲ್ಲಾ ಕೆಲಸ ಕೇವಲ 5 ನಿಮಿಷಗಳಲ್ಲಿ ಮುಗಿದಿದೆ. ಈ ಘಟನೆಯಿಂದ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಭಯಭೀತರಾಗಿದ್ದರು.
ದರೋಡೆಕೋರರು ಹಣವನ್ನು ತೆಗೆದುಕೊಂಡು ಓಡಿಹೋದ ನಂತರ, ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೂಡಲೇ ಘಟನೆ ನಡೆದ ಬ್ಯಾಂಕ್ ಆಫ್ ಮಹಾರಾಷ್ಟ್ರ ತಲುಪಿದ್ದಾರೆ. ಬಳಿಕ ಘಟನೆಯ ಕುರಿತು ತನಿಖೆ ಆರಂಭಿಸಿದರು. ದರೋಡೆಯ ಸಂಪೂರ್ಣ ದೃಶ್ಯ ಬ್ಯಾಂಕ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬಳಿಕ ಬ್ಯಾಂಕಿನಿಂದ ದುಷ್ಕರ್ಮಿಗಳು ತೆಗೆದುಕೊಂಡು ಹೋಗಿದ್ದ ಹಣವನ್ನು ಸಿಬ್ಬಂದಿ ಎಣಿಕೆ ಮಾಡಿದಾಗ 14 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ.
ಬಳಿಕ ಬ್ಯಾಂಕ್ ಉದ್ಯೋಗಿಗಳ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ವಿಡಿಯೋಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.