ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಸುದ್ದಿಒನ್, ಚಿತ್ರದುರ್ಗ(ಆ.11): ಕವಾಡಿಗರ ಹಟ್ಟಿಯಲ್ಲಿ ಜರುಗಿದ ಕಲುಷಿತ ನೀರು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಶುಕ್ರವಾರ ಕವಾಡಿಗರ ಹಟ್ಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಇಲ್ಲಿನ ವಿವಿಧ ಮನೆಗಳಿಗೆ ತೆರಳಿ, ಪರಿಸ್ಥಿತಿಯ ಬಗ್ಗೆ ವಿಚಾರಿಸಿದರು, ಸಾರ್ವಜನಿಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ಯಾರೂ ಕೂಡ ಸುಳ್ಳು ವದಂತಿಗಳನ್ನು ನಂಬಬೇಡಿ, ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಹಾಗೂ ಶೌಚಾಲಯಗಳನ್ನು ಬಳಸುವಂತೆ ಮನವಿ ಮಾಡಿದರು.
ಕವಾಡಿಗರ ಹಟ್ಟಿಗೆ ನೀರು ಪೂರೈಸಲಾಗುವ ಓವರ್ ಹೆಡ್ ಟ್ಯಾಂಕ್ ಬಳಿ ತೆರಳಿ ಪರಿಶೀಲನೆ ನಡೆಸಿದ ಲೋಕಾಯುಕ್ತರು, ನಂತರ ಇಲ್ಲಿನ ಶಾಲೆಯಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿರುವ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಇಬ್ಬರು ಶುಶ್ರೂಷಕರು ಮಾತ್ರ ಉಪಸ್ಥಿತರಿದ್ದು, ಕರ್ತವ್ಯ ನಿರತ ವೈದ್ಯರು ಹಾಜರಿರಲಿಲ್ಲ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಲೋಕಾಯುಕ್ತರು, ವೈದ್ಯರಾದಂತಹವರು ನೊಂದ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬಿ, ಧೈರ್ಯ ಹೇಳಬೇಕು. ಆತಂಕವನ್ನು ದೂರವಾಗಿಸಬೇಕು ಎಂದರು.
ನಂತರ ಚಿಕಿತ್ಸಾ ಕೇಂದ್ರಕ್ಕೆ ಗುರುವಾರ ರಾತ್ರಿ ಇಬ್ಬರು ಹೊಟ್ಟೆ ನೋವು ಎಂದು ಹೇಳಿ, ಔಷಧಿ ಪಡೆದು ಬಳಿಕ ಬಸವೇಶ್ವರ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಲಾಗಿದೆ ಎಂಬ ಮಾಹಿತಿ ಪಡೆದ ಲೋಕಾಯುಕ್ತರು, ಈ ಇಬ್ಬರೂ ಅಸ್ವಸ್ಥರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ವಿಚಾರಿಸಿ, ಆತಂಕಪಡದಂತೆ ಧೈರ್ಯ ತುಂಬಿದರು.
ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ಮಹಿಳೆಯ ಮನೆಗೆ ಭೇಟಿ ನೀಡಿದ ಲೋಕಾಯುಕ್ತರು, ಕುಟುಂಬಸ್ಥರಿಗೆ ಸಾಂತ್ವನದ ಮಾತುಗಳನ್ನಾಡಿದರು. ಅಲ್ಲದೆ ಪರಿಹಾರ ಮೊತ್ತ ಸ್ವೀಕರಿಸಿದ ಬಗ್ಗೆ ಮಾಹಿತಿ ಪಡೆದುಕೊಂಡರು. ಮನೆಯ ಸ್ಥಿತಿ, ಅನೈರ್ಮಲ್ಯದ ಪರಿಸರ ಕಂಡು, ಶೌಚಾಲಯ ಇಲ್ಲವೇ, ಶೌಚಾಲಯ ಕಟ್ಟಿಸಿಕೊಳ್ಳಲು ಸ್ಥಳ ಇದೆ ತಾನೆ ಎಂದು ಪ್ರಶ್ನಿಸಿದರು. ಇದಕ್ಕೆ, ಜಾಗ ಇದೆ, ಆದರೆ ಶೌಚಾಲಯ ಇಲ್ಲ, ಬಯಲಿಗೆ ಅಥವಾ ರಸ್ತೆ ಬದಿಗೆ ಶೌಚಕ್ಕೆ ತೆರಳುವುದಾಗಿ ಹೇಳಿದರು. ಸರ್ಕಾರದ ಯೋಜನೆಯಡಿ ಈ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿಕೊಡಲು ಕೂಡಲೆ ಕ್ರಮ ವಹಿಸುವಂತೆ ಲೋಕಾಯುಕ್ತರು ಪೌರಾಯುಕ್ತರು ಸೂಚನೆ ನೀಡಿದರು.
ಕವಾಡಿಗರ ಹಟ್ಟಿಯಲ್ಲಿನ ಸಾರ್ವಜನಿಕರ ಮನೆಗಳಿಗೆ ಲೋಕಾಯುಕ್ತರು ತೆರಳಿ, ಅವರ ಆರೋಗ್ಯ ವಿಚಾರಿಸಿದರು. ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯಿಸಿ, ಈ ಪ್ರದೇಶದಲ್ಲಿ ಯಾವತ್ತೂ ಕಲುಷಿತ ನೀರು ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಈಗ ಆಗಿದೆ, ಈ ಬಗ್ಗೆ ಸೂಕ್ತ ರೀತಿಯ ತನಿಖೆ ಆಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು, ನಮಗೆ ಮೂಲಭೂತ ಸೌರ್ಕಯ ಒದಗಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು, ಕಲುಷಿತ ನೀರು ಪ್ರಕರಣದಲ್ಲಿ ಎಲ್ಲ ರೀತಿಯಿಂದಲೂ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ, ಅಲ್ಲದೆ ಯಾರೂ ಆತಂಕಪಡುವ ಅಗತ್ಯವಿಲ್ಲ, ಕಲುಷಿತ ನೀರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಾವೇ ಖುದ್ದಾಗಿ ಜಿಲ್ಲೆಗೆ ಹಾಗೂ ಈ ಪ್ರದೇಶಕ್ಕೆ ಬಂದು ಮಾಹಿತಿ ಪಡೆಯುತ್ತಿದ್ದೇನೆ. ನೀರು ಹಾಗೂ ಇತರೆ ಅಂಶಗಳ ಬಗ್ಗೆ ಉನ್ನತ ಪರೀಕ್ಷಾ ವರದಿಗಳು ಇನ್ನೂ ಬರಬೇಕಿದೆ. ವರದಿ ಬಂದ ಬಳಿಕ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ಈ ಬಗ್ಗೆ ಸುಳ್ಳು ಸುದ್ದಿಗಳನ್ನು ಅಥವಾ ವದಂತಿಗಳನ್ನು ನಂಬಬಾರದು. ಹಟ್ಟಿಯಲ್ಲಿ ನೈರ್ಮಲ್ಯದ ಕೊರತೆ ಆಗಿರುವುದು ಕಂಡುಬಂದಿದೆ, ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು, ಇದಕ್ಕಾಗಿ ಪರಿಸರ ಉತ್ತಮವಾಗಿ ಇಡುವ ಬಗ್ಗೆ ಸಾರ್ವಜನಿಕರೂ ಕೂಡ ಸಹಕರಿಸಬೇಕು. ತಮ್ಮ ತಮ್ಮ ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಪ್ರತಿಯೊಂದು ಕುಟುಂಬಗಳೂ ಕೂಡ ಶೌಚಾಲಯವನ್ನು ಬಳಸಬೇಕು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಅಲ್ಲದೆ ಕವಾಡಿಗರ ಹಟ್ಟಿಯಲ್ಲಿ ಕುಟುಂಬ ಶೌಚಾಲಯಗಳನ್ನು ನಿರ್ಮಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಾಸುದೇವರಾಮ್, ಡಿವೈಎಸ್‍ಪಿ ಮೃತ್ಯುಂಜಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗನಾಥ್, ಪೌರಾಯುಕ್ತ ಶ್ರೀನಿವಾಸ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.