ಸುದ್ದಿಒನ್, ಚಿತ್ರದುರ್ಗ,ಆ.08 : ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆಗೆ ಸಮಾನ ಸ್ಥಾನಮಾನ ದೊರೆಯಬೇಕೆಂದು ಧ್ವನಿ ಎತ್ತಿದವರು ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳು. ಮಾತು ಜಗತ್ತಿಗೆ ಬೆಳಕು ಮೂಡಿಸುವಂತಿರಬೇಕು ಎನ್ನುವ ಆಶಯ ಅವರದಾಗಿತ್ತು ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.
ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದಲ್ಲಿ ನಡೆದ ಲಿಂ. ಶ್ರೀ ಜ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ 29ನೇ ವರ್ಷದ ಸ್ಮರಣೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀಗಳು ಜ್ಞಾನದ ಭಂಡಾರವಾಗಿದ್ದರು. ಶ್ರೀಮಠದ ಇತಿಹಾಸದಲ್ಲಿ ಅವರ ಕಾಲವು ವೈಭವದ ಕಾಲ. ಎಸ್.ಜೆ.ಎಂ. ವಿದ್ಯಾಪೀಠ ಸ್ಥಾಪನೆ ನಾಡಿಗೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಭಕ್ತರ ಹೃದಯ ಸಿಂಹಾಸನವನ್ನೇರಿದವರು. ಸಮಾಜಕ್ಕಾಗಿ ದುಡಿಯುವ ಸ್ವಾಮಿಗಳಿಗೆ ನೋವು ಕೊಡಬಾರದು. ಅದರಿಂದ ಪಶ್ಚಾತ್ತಾಪ ಅನುಭವಿಸುತ್ತಾರೆ. ಅವರು ಇಚ್ಛಾಮರಣಿಗಳು. ಅವರ ಸಮಾಜಮುಖಿ ಕಾರ್ಯಗಳು ನಮಗೆ ಆದರ್ಶವಾಗಿವೆ ಎಂದರು.
ಶ್ರೀ ಮೋಕ್ಷಪತಿ ಸ್ವಾಮಿಗಳು ಮಾತನಾಡಿ, ಶ್ರೀಗಳು ಎಲ್ಲ ಸಮುದಾಯದವರನ್ನು ಪ್ರೀತಿಸುತ್ತಿದ್ದರು. 1966ರಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ, ಅನೇಕ ಬಡವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ವರದಾನವಾಗಿದ್ದಾರೆ. ಅವರು ನಾಡಿಗೆ ಸಲ್ಲಿಸಿದ ಸಾಹಿತ್ಯಕ ಸೇವೆ ಅಪಾರವಾದುದು ಎಂದರು.
ಶ್ರೀ ಶಿವಬಸವ ಸ್ವಾಮಿಗಳು ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ಮಠದಲ್ಲಿರುವಾಗ ಮಠದ ಪ್ರಾಂಗಣದಲ್ಲಿ ಜನರು ನಿಶ್ಶಬ್ಧವಾಗಿರುತ್ತಿದ್ದರು. ಅವರು ಶೈಕ್ಷಣಿಕ ಕ್ರಾಂತಿ ಮಾಡದಿದ್ದರೆ ಇಂದು ಜನರು ಮೌಢ್ಯದಿಂದಿರುತ್ತಿದ್ದರು. ಅಂತಹ ಕ್ರಾಂತಿ ಶ್ರೀಮಠ ಮಾಡಿದೆ. ನಾವೆಲ್ಲರೂ ಒಟ್ಟಾಗಿ ಶ್ರೀಮಠದ ಪರ ನಿಂತು ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಇಡೀ ಭಾರತದಲ್ಲಿ ಶೂನ್ಯ ಪರಂಪರೆ ಎಂದರೆ ಚಿತ್ರದುರ್ಗದ ಶ್ರೀ ಮುರುಘಾಮಠ. ಈ ಪರಂಪರೆಯನ್ನು ಎತ್ತರಕ್ಕೆ ಕೊಂಡೊಯ್ದವರು ಶ್ರೀ ಮಲ್ಲಿಕಾರ್ಜುನ ಶ್ರೀಗಳು. ಮುರುಘಾ ಮಠವೆಂದರೆ ಅದು ಜ್ಞಾನಪೀಠ. ಶ್ರೀಮಠವನ್ನು ನಾವೆಲ್ಲರೂ ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ ಎಂದು ನುಡಿದರು.
ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು ಮಾತನಾಡಿ, ಶ್ರೀಗಳ ಬಗ್ಗೆ ಮಾತನಾಡಬೇಕೆಂದರೆ ಗಟ್ಟಿತನ ಬೇಕು. ಮಹಾನ್ ಪಂಡಿತರು. ಅವರ ಮಾತುಗಳನ್ನು ಕೇಳುವುದೇ ಒಂದು ಪುಣ್ಯ. ಅವರು ಶೈಕ್ಷಣಿಕ ಕ್ರಾಂತಿ ಮಾಡಿದರು. ಅವರ ಮಾತುಗಳಲ್ಲಿ ತೇಜಸ್ಸು ಇತ್ತು. ಅವರ ಚೈತನ್ಯ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಸ್ಮರಿಸಿದರು. ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಮಲ್ಲಿಕಾರ್ಜುನ ಜಗದ್ಗುರುಗಳ ದರ್ಶನ ಪಡೆಯುವುದೇ ಒಂದು ಪುಣ್ಯ ಎಂದು ಹೇಳಿದರು.
ಶಾಸಕ ಎಂ. ಚಂದ್ರಪ್ಪ, ಎಸ್.ಎಂ. ಕೊಟ್ರೇಶಪ್ಪ ಮಾತನಾಡಿದರು.
ಶ್ರೀ ಬಸವಾದಿತ್ಯ ದೇವರು, ಶ್ರೀ ಬಸವ ಯಾದವಾನಂದ ಸ್ವಾಮಿಗಳು, ಗುರುಮಠಕಲ್‍ನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು, ಶ್ರೀ ಬಸವಮಾಚಿದೇವ ಸ್ವಾಮಿಗಳು, ವನಕಲ್ ಮಠದ ಶ್ರೀ ಬಸವರಮಾನಂದ ಸ್ವಾಮಿಗಳು, ಪಂಚಾಕ್ಷರಯ್ಯ ಮೈಸೂರು, ಚಂದ್ರಶೇಖರ ಸ್ವಾಮಿಗಳು ಜಾಪತ್ರೆಗಟ್ಟ ಮಠ, ಶ್ರೀ ರವಿಶಂಕರ ಸ್ವಾಮಿಗಳು ಗೋಕಾಕ, ಶ್ರೀ ಚಂದ್ರಶೇಖರ ಶಿವಾಚಾರ್ಯರು ಬೆಂಗಳೂರು, ಶ್ರೀ ಗಜದಂಡ ಸ್ವಾಮಿಗಳು ಐರಣಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಬ್ಯಾಡಗಿ, ಶ್ರೀ ಚನ್ನಬಸವ ಸ್ವಾಮಿಗಳು ಶಿಕಾರಿಪುರ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ನಿಪ್ಪಾಣಿ, ಶ್ರೀ ಕೇತೇಶ್ವರ ಸ್ವಾಮಿಗಳು, ಶ್ರೀ ಮುರುಘರಾಜ ದೇಶೀಕೇಂದ್ರ ಸ್ವಾಮಿಗಳು ಅಣಜಿ, ಎಚ್. ಆನಂದಪ್ಪ, ಕೆ.ಎಂ. ವೀರೇಶ್, ಎಸ್.ಎಂ.ಎಲ್. ತಿಪ್ಪೇಸಾಮಿ, ನಾಗರಾಜ್ ಮೊದಲಾದವರಿದ್ದರು.
ಶಾಸಕ ಎಂ.ಚಂದ್ರಪ್ಪ ಮತ್ತು ಪ.ಪಂ. ಸದಸ್ಯ ಮುರುಗೇಶ್ ಸ್ಮರಣೋತ್ಸವದ ದಾಸೋಹ ಸೇವೆ ಮಾಡಿದರು. ಎಚ್. ಆನಂದಪ್ಪ ಗದ್ದುಗೆ ಹೂವಿನ ಅಲಂಕಾರದ ದಾಸೋಹವನ್ನು ನೆರವೇರಿಸಿದರು.
ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ಬಸವರಾಜಯ್ಯ ಸ್ವಾಗತಿಸಿದರು. ಮುರುಗೇಶ್ ನಿರೂಪಿಸಿದರು.