ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್,ಚಿತ್ರದುರ್ಗ,ಆ.07 : ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದಾಗ ಜಾರಿಗೆ ತಂದ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿರುವುದನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ 2018 ರಿಂದ 23 ರವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಬಡವರು, ರೈತರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗಾಗಿ ಜಾರಿಗೆ ತಂದ ಅನೇಕ ಯೋಜನೆಗಳನ್ನು ರದ್ದುಪಡಿಸಿರುವ ಕಾಂಗ್ರೆಸ್ ಸರ್ಕಾರ ರೈತರು ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿದೆ. ಎ.ಪಿ.ಎಂ.ಸಿ. ಕಾಯಿದೆಯನ್ನು ರದ್ದುಪಡಿಸಿರುವುದು ರೈತರಿಗೆ ಮಾರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯುತ್ ದರವನ್ನು ಯೂನಿಟ್‍ಗೆ ಏಳು ರೂ.ಗೆ ಹೆಚ್ಚಿಸಿರುವುದು ಅವೈಜ್ಞಾನಿಕ. ರೈತರ ಮಕ್ಕಳ ವಿದ್ಯಾನಿಧಿ ಯೋಜನೆಗಾಗಿ ಬಜೆಟ್‍ನಲ್ಲಿ ಮೀಸಲಿಟ್ಟಿದ್ದ 438 ಕೋಟಿ ರೂ.ಗಳನ್ನು ಹಿಂದಕ್ಕೆ ಪಡೆದು ಗೋಶಾಲೆಗಳನ್ನು ರದ್ದುಪಡಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮ ಸರ್ಕಾರದ ಹದಿನೆಂಟು ಯೋಜನೆಗಳನ್ನು ಹಿಂದಕ್ಕೆ ಪಡೆದು ಜನ ವಿರೋಧಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿ ಕಾರಿದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡುತ್ತ ವಿಧಾನಸಭೆ ಚುನಾವಣಾ ಪೂರ್ವದಲ್ಲಿಯೇ ಐದು ಗ್ಯಾರೆಂಟಿಗಳನ್ನು ಘೋಷಿಸಿ ರಾಜ್ಯದ ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತುಂಬಾ ದಿನ ಉಳಿಯುವುದಿಲ್ಲ. ಮದ್ಯದ ಮೇಲೆ ಶೇ.20 ರಷ್ಟು ತೆರಿಗೆ ವಿಧಿಸಿ ದುಡಿಯುವ ವರ್ಗಕ್ಕೆ ಅನ್ಯಾಯ ಮಾಡಿ ಸಿರಿವಂತರಿಗೆ ಅನುಕೂಲ ಮಾಡಲು ಹೊರಟಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಹನ್ನೊಂದು ಸಾವಿರ ಕೋಟಿ ರೂ.ಗಳನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರೆ ಯೋಜನೆಗಳಿಗೆ ಬಳಸಿ ರಾಜ್ಯದ ಐದು ಕೋಟಿ ಜನರಿಗೆ ಮೋಸ ಮಾಡಿದ್ದಾರೆ. ಬಿಜೆಪಿ. ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಒಂದು ಯೂನಿಟ್ ಕರೆಂಟ್‍ಗೆ ಮೂರು ರೂ. ಇತ್ತು. ಈಗ ಏಳು ರೂ.ಗಳಾಗಿದೆ. ಬಡವರ ಕಣ್ಣಿಗೆ ಮಣ್ಣೆರೆಚುವ ಕಾಂಗ್ರೆಸ್ ವಿರುದ್ದ ನಿರಂತರ ಹೋರಾಟವಿರುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಭ್ರಷ್ಠ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಎಸ್ಸಿ ಎಸ್ಟಿ.ಗಳಿಗೆ ಬಳಸಬೇಕಾಗಿರುವ ಹಣವನ್ನು ಬೇರೆ ಉದ್ದೇಶಕ್ಕೆ ಉಪಯೋಗಿಸುತ್ತಿದೆ. ಇಂತಹ ನೀಚ ಸರ್ಕಾರದ ವಿರುದ್ದ ನಮ್ಮ ಹೋರಾಟ ಸದಾ ಇರುತ್ತದೆ ಎಂದು ಹೇಳಿದರು.
ಬಿಜೆಪಿ. ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಅಧಿಕಾರದಲ್ಲಿದ್ದಾಗ ರೈತರು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಕಲ್ಪಿಸಿತ್ತು. ಇದರಿಂದ ರೈತರಿಗೆ ಸಾಗಾಣಿಕೆ ವೆಚ್ಚ, ದಲ್ಲಾಳಿಗಳ ಕಮೀಷನ್, ಇತರೆ ವೆಚ್ಚಗಳು ಉಳಿಯುತ್ತಿತ್ತು. ಕಾಂಗ್ರೆಸ್ ಸರ್ಕಾರ ಇದನ್ನು ರದ್ದುಪಡಿಸಿ ಅನ್ನದಾತ ರೈತನ ಕತ್ತು ಹಿಸುಕಲು ಹೊರಟಿದೆ. ಹನ್ನೊಂದು ಲಕ್ಷ ರೈತ ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 438.69 ಕೋಟಿ ರೂ.ಗಳ ರೈತ ವಿದ್ಯಾನಿಧಿ ರದ್ದುಪಡಿಸಿ ರೈತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೈಪಾಲ್, ನರೇಂದ್ರ ಹೊನ್ನಾಳ್, ಮಲ್ಲಿಕಾರ್ಜುನ್, ಸಂಪತ್, ಚಂದ್ರಿಕ ಲೋಕನಾಥ್, ರೇಖ, ಬಸಮ್ಮ, ನಂದಿ ನಾಗರಾಜ್, ನಾಗರಾಜ್‍ಬೇದ್ರೆ, ನಗರಾಧ್ಯಕ್ಷ ನವೀನ್ ಚಾಲುಕ್ಯ, ರೂಪ, ಸೂರೇನಹಳ್ಳಿ ವಿಜಯಣ್ಣ, ಸುರೇಶ್, ಕರಿಬಸಪ್ಪ, ಲೋಕೇಶ್, ರಂಗಸ್ವಾಮಿ, ಗುರುಮೂರ್ತಿ, ಕುಮಾರಸ್ವಾಮಿ, ನಾಗರಾಜ್, ಆನಂದ್, ಲೀಕಾ ಶಶಿಧರ್, ಅರುಣ ಕುಮಾರಿ, ಬೋಜರಾಜ್, ನಗರಸಭೆ ಸದಸ್ಯರುಗಳಾದ ಹರೀಶ್, ಸುರೇಶ್, ಶ್ರೀನಿವಾಸ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.