ಗೃಹಜ್ಯೋತಿ ಯೋಜನೆ ಜಾರಿಯಿಂದ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಪ್ಪಿದೆ : ಸಚಿವ ಡಿ.ಸುಧಾಕರ

3 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,.ಆ.5:  ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳಲ್ಲಿ  ಗೃಹಜ್ಯೋತಿ ಯೋಜನೆಯು ಒಂದಾಗಿದೆ. ಯೋಜನೆ ಜಾರಿ ಮಾಡಿರುವುದು ಹೆಮ್ಮೆ ಎನಿಸಿದೆ. ಗೃಹಜ್ಯೋತಿ ಯೋಜನೆ ಜಾರಿಯಿಂದ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಪ್ಪಿದೆ ಎಂದು ಯೋಜನಾ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಹೇಳಿದರು.

ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಇಂಧನ ಇಲಾಖೆ ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ  ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆ ಗೃಹಜ್ಯೋತಿ ಯೋಜನೆಗೆ ಜಿಲ್ಲಾ ಮಟ್ಟದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು‌.

ಪಕ್ಷದ ಪ್ರನಾಳಿಕೆಯಲ್ಲಿ ಹೇಳಿದಂತೆ ಯೋಜನೆ ಜಾರಿ ಮಾಡಿದ್ದೇವೆ. ಇಲ್ಲಿಯವರೆಗೆ ಮೂರು ಯೋಜನೆಗಳು ಜಾರಿಯಾಗಿವೆ. ಜಿಲ್ಲೆಯಲ್ಲಿ ಪಡಿತರ ಚೀಟಿ ಹೊಂದಿರುವವರ ಪೈಕಿ, ಶೇ.87 ರಷ್ಟು ಬಿಪಿಎಲ್ ಕಾರ್ಡು ಹೊಂದಿದರುವವರು ಇದ್ದಾರೆ. ಇದರಲ್ಲಿ ಶೇ.99 ರಷ್ಟು ಜನರು ಗೃಹಜ್ಯೋತಿಗೆ ನೋಂದಣಿ ಮಾಡಿಕೊಂಡಿದ್ದಾರೆ.ಗೃಹಜ್ಯೋತಿ ಯೋಜನೆಗೆ ಸರ್ಕಾರ ಪ್ರತಿ ವರ್ಷ ರೂ.4000 ಕೋಟಿ ಖರ್ಚು ಮಾಡಲಿದೆ. ಜಿಲ್ಲೆಗೆ ಪ್ರತಿ ವರ್ಷ ರೂ. 300 ಕೋಟಿ ಖರ್ಚು ಬರಲಿದೆ. ಇದರಿಂದ ಗ್ರಾಹಕರ ಮೇಲಿನ ಹೊರೆ ತಪ್ಪಲಿದೆ. ಮುಂದಿನ ತಿಂಗಳು 4ನೇ ಯೋಜನೆ ಗೃಹಲಕ್ಷ್ಮೀಗೆ ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು.

ಜಿಲ್ಲೆಯಲ್ಲಿ 4.7 ಲಕ್ಷ ಗೃಹ ವಿದ್ಯುತ್ ಬಳಕೆದಾರರು ಇದ್ದು, ಇದರಲ್ಲಿ 3.37 ಲಕ್ಷ ಬಳಕೆದಾರರು ಗೃಹಜ್ಯೋತಿ ಯೋಜನೆಗೆ ನೊಂದಾಯಿಸಿಕೊಂಡಿದ್ದಾರೆ. ಜುಲೈ 1 ರಿಂದ ಯೋಜನೆಯ ಲಾಭ ಬಳಕೆದಾರರಿಗೆ ದೊರೆಯಲಿದೆ. ಪ್ರತಿ ಮನೆಯ 200‌ ಯುನಿಟ್ ಗೃಹ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ನೀಡಲಾಗುವುದು. ಜಿಲ್ಲೆಯ 4.7 ಲಕ್ಷ ಬಳಕೆದಾರಿಗೆ, ಪ್ರತಿ ತಿಂಗಳು ರೂ.22.27 ಕೋಟಿ ವಿದ್ಯುತ್ ಬಿಲ್ ಬರಲಿದ್ದು, ಇದನ್ನು ಸರ್ಕಾರದಿಂದ ಬೆಸ್ಕಾಂಗೆ ಪಾವತಿಸಲಾಗುತ್ತಿದೆ. ಜಿಲ್ಲೆಯಲ್ಲಿ ಗುಣಮಟ್ಟದ ವಿದ್ಯುತ್ ಸರಬಾರಜು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತ ಮಾತನಾಡಿ, 2023 ರ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಗೃಹಜ್ಯೋತಿ ಯೋಜನೆ ಜಾರಿ ಮಾಡಲಾಗಿದೆ. ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ತಕ್ಷಣದಿಂದ ಯೋಜನೆ ಜಾರಿಗೆ ಪ್ರಯತ್ನಿಸಲಾಗುತ್ತಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ, ಗೃಹಜ್ಯೋತಿ ಅಡಿ 200 ಯನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆಗಸ್ಟ್ 18 ರಂದು ಗೃಹಲಕ್ಷ್ಮೀ ಯೋಜನೆಗೆ ಬೆಳಗಾವಿಯಲ್ಲಿ ಜಾರಿ ಮಾಡಲಾಗುವುದು ಎಂದರು.

ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಮಾತನಾಡಿ, ಕಳೆದ ತಿಂಗಳು ಜಾರಿಗೊಳಿಸಿದ ಶಕ್ತಿ ಯೋಜನೆಯಲ್ಲಿ ರಾಜ್ಯದ 1 ಕೋಟಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಓಡಾಟ ಮಾಡಿದ್ದಾರೆ‌‌. ಸರ್ಕಾರದ ಯೋಜನೆಗಳ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ‌ ಹೆಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಸಹ ಬರೆದಿದ್ದಾರೆ. ಬಡವರಿಗಾಗಿ ಯೋಜನೆಗಳ ಜಾರಿ ಮಾಡಲಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡದ ಕಾರಣ ಫಲಾನುಭವಿಗಳ ಖಾತೆ ಹಣ ಜಮೆ ಮಾಡಲಾಗಿದೆ. ಆಂದ್ರ, ತೆಲಂಗಾಣ ರಾಜ್ಯದಿಂದ ಅಕ್ಕಿ ಖರೀದಿ ಮಾಡಿ ಫಲಾನುಭವಿಗಳಿಗೆ ನೀಡಲಾಗುವುದು. ಗೃಹಜ್ಯೋತಿ ಯೋಜನೆಯ ಪ್ರಗತಿಯನ್ನು ತಾಲೂಕುವಾರು ಪರಿಶೀಲಿಸಿ, ಯೋಜ‌ನೆಯ ಲಾಭವನ್ನು ಎಲ್ಲರಿಗೂ ನೀಡಲಾಗುವುದು. ಮುಂದಿನ ದಿನಗಳಲ್ಲಿ ಯುವನಿಧಿ ಯೋಜನೆಯನ್ನು ಸಹ ಜಾರಿಗೆ ಮಾಡಲಾಗುವುದು ಎಂದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ.ವಿರೇಂದ್ರ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೃಹಜ್ಯೋತಿ ಯೋಜನೆ ಚಾಲನೆ ಕುರಿತು ರಾಜ್ಯದ ಜನತೆಗೆ ಮಾಧ್ಯಮಗಳು ತಲುಪಿಸಿ, ಪ್ರತಿಯೊಬ್ಬರು ನೊಂದಣಿ ಮಾಡಿಕೊಳ್ಳುವಂತೆ ಪ್ರೇರೇಪಿಸಬೇಕು. ಚಿತ್ರದುರ್ಗ ತಾಲೂಕಿನ 95 ಸಾವಿರ ಗೃಹ ವಿದ್ಯುತ್ ಬಳಕೆದಾರರು ಇದ್ದಾರೆ. ಗೃಹಜ್ಯೋತಿ ನೊಂದಣಿಯಲ್ಲಿ ಜಿಲ್ಲೆಯಲ್ಲಿ ಚಿತ್ರದುರ್ಗ ತಾಲೂಕು ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಮಾತನಾಡಿ,  ಸರ್ಕಾರದ 5 ಗ್ಯಾರೆಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಗಳಿಂದ ಜನರ ಜೀವನದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಸಾರ್ವಜನಿಕರು‌ ಈ ಯೋಜನೆಗಳಿಗೆ ಹೆಚ್ಚು ಹೆಚ್ಚು  ನೋಂದಣಿ ಮಾಡಿಕೊಳ್ಳುವಂತೆ ಕೋರಿದರು‌.  ಶಕ್ತಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಸಹಾಯವಾಗಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಶೇ.80 ರಷ್ಟು ನೋಂದಣಿಯಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ ಬಾಕಿ ಇರುವ 39 ಸಾವಿರ ಜನರು ನೋಂದಣಿ ಮಾಡಿಕೊಳ್ಳಬೇಕು ಎಂದರು‌‌.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 5 ಜನ ಫಲಾನುಭವಿಗಳಿವಗೆ ಶೂನ್ಯ ವಿದ್ಯುತ್ ಬಿಲ್ಲ್ ವಿತರಿಸಲಾಯಿತು. ಬೆಸ್ಕಾಂನ ದಾವಣಗೆರೆ ವಲಯದ ಅಧೀಕ್ಷಕ ಇಂಜಿನಿಯರಿಂಗ್  ಜಗದೀಶ್ ಸ್ವಾಗತಿಸಿದರು. ಚಿತ್ರದುರ್ಗ ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡದರು. ಬೆಸ್ಕಾಂ ಕಾರ್ಯಪಾಲ ಇಂಜಿನಿಯರ್ ರಾಮಚಂದ್ರ ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *