Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕವಾಡಿಗರಹಟ್ಟಿ ಪ್ರಕರಣ : ಜಿಲ್ಲಾ ಸರ್ವೇಕ್ಷಣಾ ವರದಿಯಲ್ಲಿ ಏನಿದೆ ? ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ? ಜಿಲ್ಲಾಧಿಕಾರಿ ಹೇಳಿದ್ದೇನು ?

Facebook
Twitter
Telegram
WhatsApp

ಚಿತ್ರದುರ್ಗ ಆ. 03 : ನಗರ ಸಮೀಪದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಸಾರ್ವಜನಿಕರ ಮರಣ ಹಾಗೂ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಇಂಜಿನಿಯರ್‍ಗಳನ್ನು ಕರ್ತವ್ಯ ನಿರ್ಲಕ್ಷ್ಯತೆ ಆರೋಪದ ಮೇಲೆ ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದ್ದು, ಒಬ್ಬರು ನೀರು ಸರಬರಾಜು ಸಹಾಯಕರನ್ನು ಅಮಾನತುಗೊಳಿಸಲಾಗಿದೆ ಹಾಗೂ ಇಬ್ಬರು ಹೊರಮೂಲ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ವಾಲ್ವ್ ಮ್ಯಾನ್ ಗಳನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.

ಕಳೆದ ಜು. 31 ರಂದು ಮಧ್ಯಾಹ್ನದ ನಂತರದಲ್ಲಿ ಕವಾಡಿಗರ ಹಟ್ಟಿಯ ಓವರ್ ಹೆಡ್ ಟ್ಯಾಂಕ್ ನಿಂದ ನೀರು ಸರಬರಾಜು ಆಗುವ ಪ್ರದೇಶದ ಕೆಲವು ನಿವಾಸಿಗಳು ಅಸ್ವಸ್ಥರಾಗಿದ್ದು, ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಂಜುಳ ಎಂಬುವವರು ಅಸ್ವಸ್ಥರಾಗಿ, ಆಗಸ್ಟ್ 01 ರಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆ, ಇವರ ಹೆಣ್ಣು ಮಗು ಕೂಡ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.  ಜು. 31 ರಿಂದ ಆ. 01 ರವರೆಗೆ ಈ ಪ್ರದೇಶದ ಹಲವು ಸಾರ್ವಜನಿಕರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮೃತ ಮಹಿಳೆಯ ಪತಿ ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿ ಪೊಲೀಸ್ ವಿಚಾರಣೆ ಹಂತದಲ್ಲಿದೆ.

ಜಿಲ್ಲಾ ಆರೋಗ್ಯಾಧಿಕಾರಿಗಳ ವರದಿಯಂತೆ ಜು. 31 ರಿಂದ ಆ. 02 ರವರೆಗೆ ಒಟ್ಟು 107 ಪ್ರಕರಣಗಳು ದಾಖಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ 65 ಮತ್ತು ಬಸವೇಶ್ವರ ವೈದ್ಯಕೀಯ ಆಸ್ಪತ್ರೆಯಲ್ಲಿ 42 ಅಸ್ವಸ್ಥರು ಚಿಕಿತ್ಸೆ ಪಡೆದಿದ್ದು, 07 ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ.  ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸುವ ಸಲುವಾಗಿ ಉಪವಿಭಾಗಾಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಇಂಜಿನಿಯರ್, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಪರಿಸರ ಅಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರನ್ನು ಒಳಗೊಂಡ ಜಂಟಿ ಸಮಿತಿ ರಚಿಸಿದ್ದು, ವರದಿ ನೀಡಲು ಸೂಚಿಸಲಾಗಿದೆ.

ಶುದ್ಧ ಕುಡಿಯುವ ನೀರು ಸರಬರಾಜು ಕಾರ್ಯವು ನಗರಸಭೆಯ ಆದ್ಯ ಕರ್ತವ್ಯವಾಗಿದ್ದು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಮಾಡಬೇಕಾದ ಕರ್ತವ್ಯಗಳ ಬಗ್ಗೆ ಸರ್ಕಾರದಿಂದ ಹಾಗೂ ಪೌರಾಡಳಿತ ಇಲಾಖೆಯಿಂದ ಹಾಗೂ ಜಿಲ್ಲಾಧಿಕಾರಿಗಳಿಂದ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆಗಳನ್ನು ಕಾಲಕಾಲಕ್ಕೆ ನೀಡಲಾಗಿರುತ್ತದೆ.  ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸರಬರಾಜು ಮೂಲ, ಶುದ್ಧೀಕರಣ ಘಟಕ, ಓ.ಹೆಚ್.ಟಿ, ಕೊಳವೆ ಬಾವಿ ಹಾಗೂ ಬಳಕೆದಾರರ ಕೊನೆಯ ಪಾಯಿಂಟ್‍ನಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ, ನೀರಿನ ಗುಣಮಟ್ಟದ ಪರೀಕ್ಷೆ ಮಾಡಿಸಿ, ನೀರು ಯೋಗ್ಯವಿರುವ ಬಗ್ಗೆ ಪರೀಕ್ಷಾ ವರದಿಗಳನ್ನು ಸಲ್ಲಿಸಲು ಸೂಚಿಸಲಾಗಿರುತ್ತದೆ.   ಆದರೆ ಈವರೆಗೂ ವರದಿ ಸಲ್ಲಿಕೆಯಾಗಿಲ್ಲ.

ಜಿಲ್ಲಾ ಸರ್ವೇಕ್ಷಣಾ ಘಟಕವು ಕವಾಡಿಗರಹಟ್ಟಿ ಪ್ರದೇಶದಿಂದ ಸಂಗ್ರಹಿಸಿದ 05 ನೀರಿನ ಮಾದರಿಗಳನ್ನು ಸೂಕ್ಷ್ಮಾಣು ಜೀವಿ ಪರೀಕ್ಷೆಗೊಳಿಸಿದ್ದು, ಈ ಪೈಕಿ ನಾಲ್ಕು ಮಾದರಿಗಳಲ್ಲಿ ಹೆಚ್-2 ಎಸ್ ಪರೀಕ್ಷಾ ವಿಧಾನದಿಂದ ತಿಳಿದುಬಂದಂತೆ ಕುಡಿಯಲು ಯೋಗ್ಯವಾಗಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಆ. 03 ರಂದು ವರದಿ ಸಲ್ಲಿಸಿರುತ್ತಾರೆ.   ನಗರದ ಎಲ್ಲ ಕುಡಿಯುವ ನೀರಿನ ಸಂಗ್ರಹ ತೊಟ್ಟಿಗಳನ್ನು ಸ್ವಚ್ಛಗೊಳಿಸಿ, ನೀರಿನ ಲೀಕೇಜ್‍ಗಳನ್ನು ದುರಸ್ತಿಗೊಳಿಸಿ, ಕ್ಲೋರಿನೇಷನ್ ಮಾಡುವಂತೆ ಹಲವು ಬಾರಿ ತಿಳಿಸಲಾಗಿದ್ದರೂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ ಆರ್ ಗಿರಡ್ಡಿ ಹಾಗೂ ಕಿರಿಯ ಅಭಿಯಂತರ ಎಸ್.ಆರ್. ಕಿರಣ್ ಕುಮಾರ್ ಅವರು ಸೂಚನೆಯನ್ವಯ ಕಾರ್ಯ ನಿರ್ವಹಿಸಿಲ್ಲ.  ಹೀಗಾಗಿ ಕರ್ತವ್ಯ ನಿರ್ಲಕ್ಷ್ಯ ಎಸಗಿರುವ ಬಗ್ಗೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು.

ಪೌರಾಯುಕ್ತರು ಹಾಗೂ ಕಿರಿಯ ಅಭಿಯಂತರ ಎಸ್.ಆರ್. ಕಿರಣ್ ಕುಮಾರ್ ಅವರು ತಮ್ಮ ಸಮಜಾಯಿಷಿ ನೀಡಿದ್ದು, ಸಹಾಯಕ ಕಾರ್ಯಪಾಲಕ ಅಭಿಯಂತರರು ನೋಟಿಸ್‍ಗೆ ಉತ್ತರವಾಗಿ ತಮ್ಮ ಸಮಜಾಯಿಷಿ ಸಲ್ಲಿಸುವ ಪ್ರಯತ್ನ ಸಹ ಮಾಡಿರುವುದಿಲ್ಲ.  ಕಿರಿಯ ಅಭಿಯಂತರರು ತಮ್ಮ ಕರ್ತವ್ಯ ನಿರ್ಲಕ್ಷ್ಯತೆ ಬಗ್ಗೆ ಯಾವುದೇ ಸಮರ್ಥನೀಯ ಕಾರಣ ನೀಡಿರುವುದಿಲ್ಲ.

ನಾಲ್ಕು ನೀರಿನ ಮಾದರಿಗಳಲ್ಲಿ ಹೆಚ್-2 ಎಸ್ ಪರೀಕ್ಷಾ ವಿಧಾನದಿಂದ ತಿಳಿದುಬಂದಂತೆ ಕುಡಿಯಲು ನೀರು ಯೋಗ್ಯವಾಗಿಲ್ಲ ಎಂಬುದಾಗಿ ಜಿಲ್ಲಾ ಸರ್ವೇಕ್ಷಣಾ ಘಟಕ ವರದಿ ನೀಡಿದ್ದು, ಮೇಲ್ನೋಟಕ್ಕೆ ಚಿತ್ರದುರ್ಗ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಆರ್ ಗಿರಡ್ಡಿ ಹಾಗೂ ಕಿರಿಯ ಅಭಿಯಂತರ ಎಸ್.ಆರ್. ಕಿರಣ್ ಕುಮಾರ್ ಅವರ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ಕಂಡುಬಂದಿರುವುದರಿಂದ, ಇವರನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.  ಕವಾಡಿಗರ ಹಟ್ಟಿ ಪ್ರದೇಶಕ್ಕೆ ಓವರ್ ಹೆಡ್ ಟ್ಯಾಂಕ್‍ನಿಂದ ವಾಲ್ವ್ ಆಪರೇಟ್ ಮಾಡಿ ಪೈಪ್‍ಲೈನ್‍ಗೆ ನೀರು ಬಿಡುವ ಆಪರೇಟರ್, ನೀರು ಸರಬರಾಜು ಸಹಾಯಕ ಸಿ.ಹೆಚ್. ಪ್ರಕಾಶ್ ಬಾಬು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.  ಹಾಗೂ ಇಬ್ಬರು ಹೊರಮೂಲ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ವಾಲ್ವ್ ಮ್ಯಾನ್‍ಗಳನ್ನು ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಶಿಯವರ ಹಣಕಾಸಿನ ಸಮಸ್ಯೆಯಿಂದಾಗಿ ನೆಮ್ಮದಿಗೆ ಭಂಗ

ರಾಶಿಯವರ ಹಣಕಾಸಿನ ಸಮಸ್ಯೆಯಿಂದಾಗಿ ನೆಮ್ಮದಿಗೆ ಭಂಗ : ಈ ರಾಶಿಯವರ ಕುಟುಂಬದಲ್ಲಿ ಒಬ್ಬರಿಂದ ಅಶಾಂತಿಯ ವಾತಾವರಣ: ಸೋಮವಾರ ರಾಶಿ ಭವಿಷ್ಯ -ನವೆಂಬರ್-25,2024 ಸೂರ್ಯೋದಯ: 06:30, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಚಿತ್ರದುರ್ಗ | ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ : ವಕೀಲರಿಗೆ ಸನ್ಮಾನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋಲಿಗೆ ಆ ಐವರು ಕಾರಣವೇ ?

ಸುದ್ದಿಒನ್ | ಮಹಾರಾಷ್ಟ್ರ ಚುನಾವಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಕೇವಲ 16 ಸ್ಥಾನಗಳನ್ನು ಗೆದ್ದಿದೆ. ಭಾರೀ ಸೋಲಿನ ನಂತರ ಪಕ್ಷವು ಇವಿಎಂಗಳಿಂದ ನಮಗೆ ಸೋಲಾಗಿದೆ ಎಂದು ದೂರಿದೆ. ಇವಿಎಂಗಳ ದತ್ತಾಂಶದಿಂದಾಗಿ ಚುನಾವಣೆ

error: Content is protected !!