ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ, ಭೀಮಸಮುದ್ರ,
ಮೊ : 98808 36505
ಚಿತ್ರದುರ್ಗ, (ಜು.21)‘: ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯನ್ನು ಮೈ ಗೂಡಿಸುವಲ್ಲಿ ತಾಯಿಯ ಪಾತ್ರ ಮಹತ್ತರವಾದದ್ದು ಎಂದು ತಿಪ್ಪೇಸ್ವಾಮಿ ಶ್ರೇಷ್ಟಿ ಹೇಳಿದರು.
ತಾಲ್ಲೂಕಿನ ಭೀಮಸಮುದ್ರದ ಶ್ರೀ ಭೀಮೇಶ್ವರ ಬಾಲವಿಕಾಸ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ಮತ್ತು ಒಂದನೆಯ ತರಗತಿ ಮಕ್ಕಳಿಗಾಗಿ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.
ತಾಯಿ ತಾನೆ ಮೊದಲ ಗುರುವು ಮನೆಯು ತಾನೆ ಮೊದಲ ಶಾಲೆ., ತಾಯಿಯು ಮಕ್ಕಳಲ್ಲಿ ಬಾಲ್ಯದಲ್ಲಿಯೇ ದೇಶದ ಮಹಾನ್ ನಾಯಕರ ಕಥೆಗಳನ್ನು ಹೇಳುವುದರ ಮೂಲಕ ಮಕ್ಕಳಲ್ಲಿ ಭವ್ಯ ಭಾರತದ ಸಂಸ್ಕೃತಿ ಹಾಗೂ ಮಹಾನ್ ನಾಯಕರ ಆದರ್ಶಗಳನ್ನು ಬೆಳೆಸುವ ಶಕ್ತಿ ಇರುವುದು ಕೇವಲ ತಾಯಿಗೆ ಮಾತ್ರ. ಶಿವಾಜಿ ಮಹಾರಾಜರಿಗೆ ಬಾಲ್ಯದಲ್ಲಿ ತಾಯಿ ದೇಶ ಪ್ರೇಮದ ಮಹತ್ವ ಹೇಳಿದ್ದರಿಂದ ಅವನು ಆದರ್ಶ ವ್ಯಕ್ತಿಯಾಗಿ ಬೆಳೆಯಲು ಸಹಾಯಕವಾಯಿತು. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರ ಸಭೆಗೆ ಹಾಜರಾಗಬೇಕೆಂದರು.
ಕಾರ್ಯಕ್ರಮದ ಪೂಜಾ ವಿಧಾನಗಳನ್ನು ನಡೆಸುತ್ತಾ ವೇದ ಬ್ರಹ್ಮ ಶಿವಬಸವಾನಂದ ಸ್ವಾಮಿಗಳು ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಅಕ್ಷರಾಭ್ಯಾಸ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ವೇದ ಪುರಾಣಗಳಲ್ಲಿ ಮಹಾನ್ ಋಷಿವರ್ಯರು ಮಕ್ಕಳಿಗೆ ಮರಳಿನಲ್ಲಿ ಅಕ್ಷರಾಭ್ಯಾಸ ಕಾರ್ಯವನ್ನು ಮಾಡಿಸುತ್ತಿದ್ದರು. ಬಾಲ್ಯದಲ್ಲಿ ಶಿಸ್ತನ್ನು ಕಲಿತ ಮಕ್ಕಳು ಮುಂದೆ ದೇಶವನ್ನು ನಡೆಸುವ ಸಮರ್ಥ ನಾಯಕರಾಗುವರೆಂದರು. ಪಟ್ಟಣದಲ್ಲಿ ಇದ್ದಂತಹ ಇಂತಹ ಆಚರಣೆಯನ್ನು ಈ ಶಾಲೆಯಲ್ಲಿ ಹಮ್ಮಿಕೊಂಡಿರುವುದು ನಿಜಕ್ಕೂ ಸಂತಸ ದಾಯಕವೆಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಶಿಕ್ಷಕ/ಶಿಕ್ಷಕಿಯರಿಗೆ ಅಭಿನಂದನೆಯನ್ನು ತಿಳಿಸಿದರು.
ಮುಖ್ಯೋಪಾಧ್ಯಯ ಹೆಚ್ ನಾಗರಾಜ್ ಮಾತನಾಡಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ತುಂಬಾ ಪ್ರಮುಖ್ಯತೆಯನ್ನು ಪಡೆಯಲಿದ್ದು, ಪೋಷಕರು ಹೆಚ್ಚೆಚ್ಚು ಕಾರ್ಯ ಕ್ರಮಗಳಿಗೆ ಬರಬೇಕೆಂದು ತಿಳಿಸಿದರು.
ಶಿಕ್ಷಕ ಎಮ್.ಎನ್.ರಾಮು ಮಾತನಾಡುತ್ತಾ ತಾಯಿಯು ತನ್ನ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಒಂದು ಗಂಟೆಯನ್ನು ಕಡ್ಡಾಯವಾಗಿ ವ್ಯಯಮಾಡಬೇಕೆಂದು ಮಕ್ಕಳಿಂದ ಮೊಬೈಲ್, ಟಿ.ವಿ ಮುಂತಾದವನ್ನು ದೂರ ಇಡಬೇಕೆಂದು ತಿಳಿಸಿದರು.
ಕಾರ್ಯಕ್ರಮಲ್ಲಿ ಪಿ. ಸುಂದ್ರರವರು ದೇವರ ಸ್ತೋತ್ರಗಳನ್ನು ಹೇಳಿದರು, ಶಾಲೆಯ ಶಿಕ್ಷಕರಾದ ಬಿ.ಕೆ.ಚಂದ್ರಶೇಖರ್, ಅಂತರವಳ್ಳಿ, ರುದ್ರಯ್ಯ, ರವಿಕುಮಾರ್, ಎನ್.ಟಿ. ಸುಬ್ರಮಹ್ಮಣ್ಯಂ, ಶಿಕ್ಷಕಿಯರಾದ ರಾಧಾ, ಜ್ಯೋತಿ, ವಿನೋದಮ್ಮ ಮುಂತಾದವರು ಉಪಸ್ಥಿತರಿದ್ದರು, ಸುತ್ತಮುತ್ತಲಿನ ಹಳ್ಳಿಗಳಿಂದ ಬಹಳಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದರು, ಭೀಮಸಮುದ್ರ ಹಾಗೂ ತುರೇಬೈಲು ಗ್ರಾಮಸ್ಥರು ಉಪಸ್ಥಿತರಿದ್ದರು.