ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜು.,21) : ನಗರದ ಜೋಗಿಮಟ್ಟಿ ರಸ್ತೆ ನಾಲ್ಕನೆ ಕ್ರಾಸ್‍ನಲ್ಲಿರುವ ರಾಜಕಾಲುವೆಯಲ್ಲಿ ಸುಮಾರು ವರ್ಷಗಳಿಂದಲೂ ಹೂಳು ತುಂಬಿದ್ದು, ಶೌಚಾಲಯಗಳು, ಯು.ಜಿ.ಡಿ. ಪೈಪ್‍ಲೈನ್ ತುಂಬಿ ರಾಜಕಾಲುವೆಯಲ್ಲಿ ಹರಿಯುತ್ತಿದೆ. ಕೂಡಲೆ ಹೂಳುತೆಗೆಸಿ ಚರಂಡಿ ದುರಸ್ಥಿಗೊಳಿಸುವಂತೆ ಸ್ಲಂ ಜನಾಂದೋಲನ-ಕರ್ನಾಟಕ ವತಿಯಿಂದ ಶುಕ್ರವಾರ ನಗರಸಭೆ ಮ್ಯಾನೇಜರ್‍ಗೆ ಮನವಿ ಸಲ್ಲಿಸಲಾಯಿತು.
ಮಾಳಪ್ಪನಹಟ್ಟಿ ಲೇಔಟ್‍ನ ಆಶ್ರಯ ಬಡಾವಣೆ ಎರಡನೆ ಹಂತದ ಎರಡನೆ ಬೀದಿಯಲ್ಲಿ ಚರಂಡಿ ಬ್ಲಾಕ್ ಆಗಿದ್ದು, ನೀರು ಸರಾಗವಾಗಿ ಹರಿಯದೆ ಸೊಳ್ಳೆಗಳ ತಾಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಸಫಾಯಿ ಕರ್ಮಚಾರಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಫೋಟೋ, ವೀಡಿಯೋ ಕ್ಲಿಪ್‍ಗಳನ್ನು ತೋರಿಸಿ ರಾಜಕಾಲುವೆಯಲ್ಲಿ ಹೂಳು ತೆಗೆಸಿ ಚರಂಡಿಯನ್ನು ದುರಸ್ಥಿಗೊಳಿಸುವಂತೆ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಲಂ ಜನಾಂದೋಲನ-ಕರ್ನಾಟಕ ಜಿಲ್ಲಾ ಶಾಖೆಯವರು ಆಪಾದಿಸಿದರು.
ಮೈಲಮ್ಮ ದೇವಸ್ಥಾನದ ಪಕ್ಕದ ಸಂದಿಯಲ್ಲಿ 2 ಬೀದಿ ದೀಪ ಕೆಟ್ಟು ಹೋಗಿರುವುದನ್ನು ಸರಿಪಡಿಸಬೇಕು. ತಕ್ಷಣವೇ ನಗರಸಭೆ ಕಾರ್ಯಮಗ್ನವಾಗದಿದ್ದರೆ ಮುಂದಿನ ದಿನಗಳಲ್ಲಿ ನಗರಸಭೆ ಎದುರು ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಸ್ಲಂ ಜನಾಂದೋಲನ-ಕರ್ನಾಟಕ ಜಿಲ್ಲಾ ಶಾಖೆ ಸಂಚಾಲಕ ಮಂಜಣ್ಣ ಟಿ. ಜಿಲ್ಲಾಧ್ಯಕ್ಷ ಎಂ.ಮಹೇಶ್, ಉಪಾಧ್ಯಕ್ಷೆ ಶ್ರೀಮತಿ ಮಾಲತಿ, ಕಾರ್ಯದರ್ಶಿ ಭಾಗ್ಯಮ್ಮ, ಸಹ ಕಾರ್ಯದರ್ಶಿ ವರಲಕ್ಷ್ಮಿ, ಖಜಾಂಚಿ ಮಂಜುನಾಥ, ರಾಜ್ಯ ಸಮಿತಿ ಸದಸ್ಯೆ ಮಂಜಕ್ಕ, ಸಲ್ಮ, ಡಿ.ಎಸ್.ಎಸ್.ನ ರುದ್ರಮುನಿ ಈ ಸಂದರ್ಭದಲ್ಲಿದ್ದರು.