ಕಳೆದ 15 ದಿನಗಳಿಂದ ನಡಿತಿರೋ ನಟ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ಕಾಲ್‌ಶೀಟ್ ಗಲಾಟೆ ಈದೀಗ ಕೊಂಚ ತಣ್ಣಾಗಾಗೋ ಮಟ್ಟಕ್ಕೆ ಬಂದಿದೆ. ಸುದೀಪ್ ನಿರ್ಮಾಪಕ ಕುಮಾರ್ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದಾಗ, ಈ ಜಟಾಪಟಿ ಮತ್ತಷ್ಟು ತಾರಕಕ್ಕೇರಿತ್ತು. ಈದೀಗ ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್‌ಕುಮಾರ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಮಧ್ಯಸ್ಥಿಕೆಯಲ್ಲಿ ಎಲ್ಲವೂ ಒಂದು ತಹಬದಿಗೆ ಬರೋ ಗ್ರೀನ್ ಸಿಗ್ನಲ್ ಸಿಕ್ತಿದೆ. ನಾವೆಲ್ಲರೂ ಈಗ ಒಗ್ಗಟ್ಟಿನ ಮಂತ್ರ ಪಠಿಸಬೇಕಾಷ್ಟೇ ಎಂಬ ಹಿತನುಡಿಗಳು ಶಿವಣ್ಣ ಹಾಗೂ ರವಿಚಂದ್ರನ್ ಮಾತುಗಳಿಂದ ಬಂದಿರೋ ಒಂದು ಕಾಳಜಿ.
ಕುಮಾರ್‌ರಿಂದ ಸಮಸ್ಯೆಯ ಬಗ್ಗೆ ಆಲಿಸಿರೋ ರವಿಚಂದ್ರನ್ ಕೂಡ ಕೂಡಲೇ ಇವೆಲ್ಲ ನಿಲ್ಲಬೇಕು, ಒಬ್ಬರ ಬಗ್ಗೆ ಇನ್ನೊಬ್ರು ಟೀಕೆ ಮಾಡೋದು ನಿಲ್ಲಬೇಕು ಎಂದಿದ್ದಾರೆ. ಇನ್ನು ಎಲ್ಲ ಸಂಗತಿಗಳನ್ನ ವಿವರವಾಗಿ ಕೇಳಿರುವ ರವಿಚಂದ್ರನ್, ‘ಸದ್ಯಕ್ಕೆ ಪರಿಸ್ಥಿತಿ ತಣ್ಣಗಾಗಬೇಕು, ಇಬ್ರು ನನ್ನ ನಿರ್ಧಾರಕ್ಕೆ ಬದ್ಧರಾಗಬೇಕು ಅಂದ್ರೇ ಮಾತ್ರ ನಾನು ಎಂಟ್ರಿಯಾಗ್ತಿನಿ. ಸುದೀಪ್ ಹತ್ರ ಈ ಕೂಡಲೇ ಮಾತಾಡ್ತೀನಿ, ಎಲ್ರೂ ಸ್ವಲ್ಪ ತಾಳ್ಮೆಯಿಂದ ಇದ್ರೆ ಸಮಸ್ಯೆ ಕೂತು ಬಗೆಹರಿಸಬಹುದು. ಸುದೀಪ್ ಹಾಗೂ ಕುಮಾರ್ ಇಬ್ರೂ ನೊಂದಿದ್ದಾರೆ. ಸಮಸ್ಯೆಗೆ ಪರಿಹಾರ ಸೃಷ್ಟಿಸೋಕೆ ನಾನು ಟ್ರೈ ಮಾಡ್ತೀನಿ’ ಎಂದಿದ್ದಾರೆ.
ಬಳಿಕ ನಿರ್ಮಾಪಕರ ಸಂಘ ಶಿವಣ್ಣರನ್ನ ಭೇಟಿಯಾಗಿ ಸಮಸ್ಯೆ ತಿಳಿಸಿದ್ದಾರೆ. ‘ನಮ್ ಅಪ್ಪಾಜಿ ಕೂಡ ಚಿತ್ರರಂಗವನ್ನ ಒಂದು ಫ್ಯಾಮಿಲಿ ಅಂತಿದ್ರು. ನಾನು ಇಲ್ಲಿ ಲೆಕ್ಕಚಾರದ ಬಗ್ಗೆ ಏನೂ ಮಾತನಾಡೋಕೆ ಸಾಧ್ಯವಿಲ್ಲ. ಸುದೀಪ್ ಹಾಗೂ ಕುಮಾರ್ ನಡುವೆ ಏನು ನಡೆದಿದೆ ಅವರವರಿಗೆ ಗೊತ್ತಿರುತ್ತೆ. ಇಬ್ರೂ ಚಿತ್ರರಂಗದ ಪಿಲ್ಲರ್ ಗಳೇ. ರವಿಚಂದ್ರನ್ ನನಗಿಂತ ಸೀನಿಯರ್. ಹಾಗಾಗಿ ಅವರ ಮಾತಿನಂತೆ ನಡ್ಕೊಬೇಕಾಗುತ್ತೆ. ಆದರೆ ಸಿನಿಮಾರಂಗದಲ್ಲಿ ಇವೆಲ್ಲ ಸರಿಹೋಗಿ, ಮನಸ್ತಾಪಗಳು ಕ್ಲಿಯರ್ ಆಗಬೇಕು ಅಷ್ಟೇ’ ಅಂತ ಶಿವಣ್ಣ, ಎಲ್ಲ ಜಟಾಪಟಿಗಳಿಗೆ ಬ್ರೇಕ್ ಹಾಕೋ ಪ್ರಯತ್ನ ಮಾಡಿದ್ದಾರೆ.