ಮರ್ಚೆಂಟ್ಸ್ ಬ್ಯಾಂಕ್ ಗೆ 2022-23ನೇ ಸಾಲಿನಲ್ಲಿ 4.41 ಕೋಟಿ ನಿವ್ವಳ ವರಮಾನ : ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ

suddionenews
3 Min Read

ಸುದ್ದಿಒನ್, ಚಿತ್ರದುರ್ಗ,(ಜು.17) : ನಗರದ ಪ್ರತಿಷ್ಠಿತ ಬ್ಯಾಂಕ್ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕು 2022-23ನೇ ಸಾಲಿನಲ್ಲಿ ಆದಾಯ ತೆರಿಗೆ ಪಾವತಿ ಮುನ್ನ 5.41 ಕೋಟಿ ರೂ.ಗಳ ವರಮಾನ ಗಳಿಸಿದ್ದು, ಆದಾಯ ತೆರಿಗೆ ಮತ್ತು ಅವಕಾಶಗಳಿಗೆ ಪಾವತಿಸಿದ ನಂತರ 4.41 ಕೋಟಿ ರೂಪಾಯಿಗಳ ನಿವ್ವಳ ವರಮಾನ ಗಳಿಸಿದ್ದು, 21-22ನೇ ಸಾಲಿಗಿಂತ 1.51 ಕೋಟಿ ರೂ. ಹೆಚ್ಚುವರಿ ವರಮಾನ ಗಳಿಸಿದೆ.  ಇದಕ್ಕೆ ಬ್ಯಾಂಕಿನ ಸದಸ್ಯರು ಹಾಗೂ ಗ್ರಾಹಕರ ಸಹಕಾರಕ್ಕೆ ಆಡಳಿತ ಮಂಡಳಿ ಅಭಿನಂದಿಸುತ್ತದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ ಅವರು ತಿಳಿಸಿದರು.

ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್.ಜಿ. ಕನ್ವೆನ್ಷನ್ ಹಾಲ್‍ನಲ್ಲಿ ಜು. 16 ರಂದು ನಡೆದ ಬ್ಯಾಂಕಿನ 72ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

31-03-2023ರ ವರೆಗೆ ಬ್ಯಾಂಕಿನಲ್ಲಿ 5,790 ಸದಸ್ಯರಿದ್ದಾರೆ.  ಬ್ಯಾಂಕಿನ ಅನುತ್ಪಾದಕ ಆಸ್ತಿಗಳು (ಎನ್.ಪಿ.ಎ.) ನಿವ್ವಳ ಶೂನ್ಯ ಪ್ರಮಾಣದಲ್ಲಿರುವುದು ಬ್ಯಾಂಕಿನ ಸಧೃಡತೆಯನ್ನು ಪ್ರತಿಬಿಂಬಿಸುತ್ತದೆ.  ಬ್ಯಾಂಕಿನ ಸ್ವಂತ ಬಂಡವಾಳ ಈ ಸಾಲಿನ ಲಾಭದ ವಿಲೇವಾರಿ ನಂತರ 39.83 ಕೋಟಿಗಳಷ್ಟಿದೆ.

2023ರ ಮಾರ್ಚ್ ಅಂತ್ಯಕ್ಕೆ 164.75 ಕೋಟಿ ರೂ. ಒಟ್ಟು ಠೇವಣಿ ಇದ್ದು, ಪ್ರತೀ ವರ್ಷದಂತೆ ಈ ವರ್ಷವೂ ಬ್ಯಾಂಕಿನಲ್ಲಿ ಠೇವಣಿಗಳ ಪ್ರಮಾಣದಲ್ಲಿ ಏರಿಕೆ ಇದ್ದು, ಕಳೆದ ಸಾಲಿಗಿಂತ 12.42 ಕೋಟಿ ರೂ. ಹೆಚ್ಚುವರಿ ಠೇವಣಿ ಸಂಗ್ರಹವಾಗಿದೆ.  ಬ್ಯಾಂಕಿನ ಮೇಲಿರುವ ವಿಶ್ವಾಸ ಮತ್ತು ನಂಬಿಕೆಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪರವಾಗಿ ಠೇವಣಿದಾರರೆಲ್ಲರಿಗೂ ಲಕ್ಷ್ಮೀಕಾಂತರೆಡ್ಡಿ ಧನ್ಯವಾದಗಳನ್ನು ಅರ್ಪಿಸಿದರು.

ಸತತವಾಗಿ 12 ವರ್ಷಗಳಿಂದ ಮತ್ತು ಹಿಂದಿನ ಆರ್ಥಿಕ ವರ್ಷಗಳಲ್ಲಿ 07 ವರ್ಷಗಳು ಒಟ್ಟು 19 ವರ್ಷಗಳ ಕಾಲ ಬ್ಯಾಂಕಿನ ಶೇರುದಾರರಿಗೆ ಶೇ. 25ರ ದರದಲ್ಲಿ ಲಾಭಾಂಶವನ್ನು ಪಾವತಿಸಲಾಗಿದೆ.  ಈ ಬಾರಿಯೂ ಶೇ. 25 ಲಾಭಾಂಶ ವಿತರಿಸುತ್ತಿರುವುದಾಗಿ ಹೇಳಿದಾಗ ಸಭೆಯಲ್ಲಿದ್ದ ಸದಸ್ಯರು ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಆಯವ್ಯಯವನ್ನು ಸದಸ್ಯರ ಅನುಮೋದನೆಗಾಗಿ ಮಂಡಿಸಿದಾಗ ಉಪಸ್ಥಿತರಿದ್ದ ಸದಸ್ಯರು ಚಪ್ಪಾಳೆ ಮೂಲಕ ಅನುಮೋದನೆ ನೀಡಿದರು.

ರೂ. ಐದು ಲಕ್ಷದವರೆಗಿನ ಬ್ಯಾಂಕಿನ ಸದಸ್ಯರ ಮತ್ತು ಗ್ರಾಹಕರ ಡಿಪಾಜಿಟ್‍ಗಳು ಡಿಐಸಿಜಿಸಿ ವಿಮೆಗೆ ಒಳಪಟ್ಟಿರುವುದು ಸೇರಿದಂತೆ ಬ್ಯಾಂಕಿನ ಸದಸ್ಯರುಗಳಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಸೌಲಭ್ಯಗಳನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ತಿಳಿಸಿದ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ ಅವರು ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ಸದಸ್ಯರ ಸಹಕಾರವನ್ನು ಕೋರಿದಾಗ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಸದಸ್ಯರುಗಳಿಗೆ, ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ನಗದು, ಪ್ರಶಸ್ತಿ ಪತ್ರ ಸೇರಿದಂತೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಯಿತು.

ಬ್ಯಾಂಕಿನ ಸದಸ್ಯರು ಹಾಗೂ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಶಾಸಕರಾದ ವಿ. ವೆಂಕಟೇಶ್ ಅವರನ್ನು ಇದೇ ಸಂದರ್ಭದಲ್ಲಿ ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.
ಬ್ಯಾಂಕಿನ ಸಿಬ್ಬಂದಿ ಸರಸ್ವತಿ, ಕೃತಿಕಾ ಪ್ರಾರ್ಥಿಸಿದರು.  ಹಿಂದಿನ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀಮತಿ ಎಸ್.ಎನ್. ವಾಣಿ ವಾಚಿಸಿದರು.  ಬ್ಯಾಂಕಿನ ನಿರ್ದೇಶಕ ಪಿ.ಎಲ್. ಸುರೇಶ್ ರಾಜು ಸ್ವಾಗತಿಸಿದರು.

ಕಳೆದ ಸರ್ವ ಸದಸ್ಯರ ಸಭೆಯ ದಿನಾಂಕದಿಂದ ಇಲ್ಲಿಯವರೆಗೂ ದೈವಾಧೀನರಾದ ಸದಸ್ಯರಿಗೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಮೃತ ಸದಸ್ಯರ ಹೆಸರುಗಳನ್ನು ನಿರ್ದೇಶಕ ರಘುರಾಮ ರೆಡ್ಡಿ ವಾಚಿಸಿದರು.  ಮತ್ತೊಬ್ಬ ನಿರ್ದೇಶಕ ಶ. ಮಂಜುನಾಥ ವಂದಿಸಿದರು.

ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್. ಮಲ್ಲಿಕಾರ್ಜುನ 2022-23ನೇ ಮಹಾಸಭೆಯ ನೋಟೀಸನ್ನು ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.  ಸರ್ವ ಸದಸ್ಯರ ಸಭೆ ಯಶಸ್ವಿಗೆ ಶ್ರಮಿಸಿದ ಬ್ಯಾಂಕಿನ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಪಿಗ್ಮಿ ಸಂಗ್ರಹಕಾರರು ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.

Share This Article
Leave a Comment

Leave a Reply

Your email address will not be published. Required fields are marked *