ವರದಿ ಮತ್ತು ಫೋಟೋ ಕೃಪೆ
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ, ಚಿತ್ರದುರ್ಗ
ಮೊ : 94483 38821
ಸುದ್ದಿಒನ್, ಚಿತ್ರದುರ್ಗ, (ಜು.16) : ವಿಜ್ಞಾನ ಮತ್ತು ತಾಂತ್ರಿಕಜ್ಞಾನಗಳ ಬೆಳವಣಿಗೆಯಾದಾಗಿನಿಂದ, ಮಾನವ ಅನೇಕ ಭೌಗೋಳಿಕ ಶಕ್ತಿಗಳನ್ನು ತನ್ನ ಹಿಡಿತಕ್ಕೆ ಒಳಪಡಿಸಿಕೊಂಡಿರುವುದು ನಿಜವಾದರೂ ಮಾನವನ ಮೇಲೆ ಆಗಾಗ್ಗೆ ಎರಗುವ ಪ್ರಕೃತಿ ವಿಪತ್ತುಗಳು ಇಂದೂ ಸಹ ಜನಜೀವನವನ್ನು ಹಠಾತ್ತವೆ ಹದಗೆಡಿಸುತ್ತಿವೆ.
ನನ್ನ ದೇಶವು ಕೃಷಿ ಪ್ರಧಾನವಾದ ದೇಶ ಮತ್ತು ಕೃಷಿಯು ನಿಶ್ಚಿತ ಮಳೆಯ ಮೇಲೆ ಅತಿಯಾದ ಅವಲಂಬನೆಯನ್ನು ಹೊಂದಿದೆ. ನಮ್ಮ ದೇಶದಲ್ಲಿ ಸುಮಾರು ಶೇ. 75ರಷ್ಟು ಸಾಗುವಳಿಗೆ ಯೋಗ್ಯವಾದ ಭೂಮಿ ನೀರಿಗಾಗಿ ಮಳೆಯನ್ನು ಎದುರು ನೋಡುತ್ತಿರುತ್ತದೆ. ಆದರೆ ಮಳೆ ತುಂಬಾ ಅಮರ್ಪಕವಾಗಿಯೂ, ಅನಿಶ್ಚಿತವಾಗಿಯೂ, ಕ್ರಮವಿಲ್ಲದೆಯೂ ಆಗುವುದರಿಂದ ರೈತರ ಜೀವನ ಅದೋಗತಿಯಲ್ಲಿದೆ.
ಮಳೆರಾಯನು ಮನಬಂದಂತೆ ಕಣ್ಣು ಮುಚ್ಚಾಲೆ ಆಟ ಆಡಲು ಬಿಸದೆ, ಮಾನವನು ಇಷ್ಟಪಟ್ಟ ಜಾಗದಲ್ಲಿ ಮಳೆಯನ್ನು ಸುರಿಸುವಂತೆ ಮಾನವನಿರ್ಮಿತ ಏರ್ಪಾಟನ್ನು ಮೊಡ ಬಿತ್ತನೆ ಅಥವಾ ಕೃತಕ ಮಳೆ ತರಿಸುವುದು ಎಂದು ಕರೆಯಲಾಗಿದೆ.
ತಜ್ಞರ ಅಭಿಪ್ರಾಯದಂತೆ ಅಂದಾಜಿನ ಪ್ರಕಾರ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಅರೇಭಿಯನ್ ಸಮುದ್ರದಿಂದ ಸುಮರು 7700 ಬಿಲಿಯನ್ ಕ್ಯೂಬಿಕ್ ಮೀಟರ್‌ನಷ್ಟು ನೀರು ಆವಿಯಾಗುತ್ತದೆ. ಮತ್ತು ಇದೇ ಅವಧಿಯಲ್ಲಿ ನೈರುತ್ಯ ಮಾರುತಗಳಿಂದ ನಮಗೆ ಮಳೆ ರೂಪದಲ್ಲಿ ದೊರೆಯುವ ನೀರಿನ ಪ್ರಮಾಣ ಕೇವಲ 2400 ಬಿಲಿಯನ್ ಕ್ಯೂಬಿಕ್ ಮೀಟರ್‌ನಷ್ಟು ಮಾತ್ರ. ಉಳಿದ ನೀರಿನ ಪ್ರಮಾಣ ಮೋಡದ ರೂಪದಲ್ಲಿ ಗಾಳಿಯ ಮೂಲಕ ಚದುರಿ ಹೋಗುತ್ತದೆ. ಈ ಸಮಯದಲ್ಲಿ ವೃಥಾ ಪೋಲಾಗುವ ಶೇ. 2ರಷ್ಟು ಮಾತ್ರ ಭೂಮಿ ಮೇಲೆ ಮಳೆಯಾಗುವುದು.
ಮೊಟ್ಟ ಮೊದಲಿಗೆ 1946ರಲ್ಲಿ ಡಾ. ವಿನ್ಸೆಂಟ್ ಸ್ನೇಫರ್ ಎಂಬ ವಿಜ್ಞಾನಿ ಅಮೇರಿಕಾದ ನ್ಯೂಯಾರ್ಕ್‍ನಲ್ಲಿ ಕೃತಕ ಮಳೆ ಬಗ್ಗೆ ಸಂಶೋಧನೆ ನಡೆಸಿ ಯಶಸ್ವಿ ಕಂಡನು. ಆದುದರಿಂದ ಅವರನ್ನು ಈ ಕಾರ್ಯದ ಜನಕ ಎಂದು ಹೆಸರು ಪಡೆದಿದ್ದಾರೆ.
ಗಾಳಿಯಲ್ಲಿ ಅಥವಾ ವಾತಾವರಣದಲ್ಲಿ ತೇವಾಂಶ ಇರುತ್ತದೆ. ಭೂಮಿಯ ಮೇಲ್ಮೈಯಿಂದ ಬಿಸಿಗಾಳಿ ಮೇಲಕ್ಕೆ ಹೋಗಿ ತಂಪಾಗುತ್ತದೆ. ತತ್ಪರಿಣಾಮವಾಗಿ ತೇವಾಂಶದ ಸ್ವಲ್ಪ ಭಾಗ ಮತ್ತಷ್ಟು ತಂಪಾಗಿ ನೀರಿನ ಹನಿಗಳು ರೂಪುಗಳೊಳ್ಳುತ್ತವೆ. ಈ ಹನಿಗಳು ಬೇರೆ ಹನಿಗಳೊಡನೆ ಸಂಯೋಗವಾದಲ್ಲಿ, ಆಗ ಹನಿಗಳ ತೂಕವು ಅಧಿಕಗೊಂಡು ಅವು ಮಳೆರೂಪದಲ್ಲಿ ಭೂಮಿಗೆ ಸುರಿಯುತ್ತವೆ.
ಅಂತಹ ಸಂದರ್ಭಗಳಲ್ಲಿ ಕೃತಕವಾಗಿ ಈ ಹನಿಗಳು ಸಂಯೋಗವಾಗುವಂತೆ ಮಾಡಿದಲ್ಲಿ ಮಳೆಯನ್ನು ಪಡೆಯಬಹುದು. ಇದಕ್ಕಾಗಿ ವಾತಾವರಣದಲ್ಲಿ ಧೂಳಿನ ಕಣಗಳು ಮಂಜುಗಡ್ಡೆಯ ಹರಳುಗಳಾಗುವಂತೆ ಮಾಡಬೇಕು. ಈ ಹರಳುಗಳು ಮೋಡದಲ್ಲಿನ ನೀರಿನ ಹನಿಗಳೊಡನೆ ಸಂಯೋಗವಾಗಿ ಭಾರಗೊಂಡು ಭೂಮಿಯತ್ತ ಬರುತ್ತವೆ.
ಮಂಜುಗಡ್ಡೆಯ ಹರಳುಗಳನ್ನು ನೇರವಾಗಿ ಒದಗಿಸುವುದರ ಬದಲು ಅದರಂತೆ ಕಾರ್ಯನಿರ್ವಹಿಸುವ ಬೆಳ್ಳಿಯ ಅಯೋಡೈಡ್ ಮತ್ತು ಸಾಮಾನ್ಯ ಅಡುಗೆ ಉಪ್ಪಿನ ಅಥವಾ ಸಿಲ್ವರ್ ಅಯೋಡೈಡ್ ಅಂಡ್ ಸೋಡಿಯಂ ಕ್ಲೋರೈಡ್ ಹರಳುಗಳ ನೆರವಿನಿಂದ ಮೋಡದಲ್ಲಿನ ನೀರಿನ ಹನಿಗಳ ಭಾರವನ್ನು ಅಧಿಕಗೊಳಿಸಿ ಕೃತಕ ವಿಧಾನದಿಂದ ಮಳೆಯನ್ನು ಪಡೆಯಬಹುದು.
ಆಕಾಶದಲ್ಲಿ ಮೋಡವೇ ಇಲ್ಲದಿದ್ದಾಗ ಕೃತಕ ಮಳೆ ಸುರಿಸುವುದು ಸಾಧ್ಯವಿಲ್ಲ. ಮೋಡಗಳು ಭೂಮಿಯಿಂದ 6 ರಿಂದ 9 ಕಿಲೋಮೀಟರ್‍ಗಳ ದೂರದಲ್ಲಿದ್ದು 0.5 ಬಿಲಿಯನ್ ಕ್ಯೂಬಿಕ್ ಮೀಟರ್‍ಗಳಷ್ಟು ತೇವಾಂಶ ಅಥವಾ ನೀರಾವಿಯ ಪ್ರಮಾಣ ಹೊಂದಿರಬೇಕು.
ಇಂತಹ ಸಮಯದಲ್ಲಿ ಮೋಡಗಳ ಮೇಲೆ ಬೆಳ್ಳಿಯ ಅಯೋಡೈಡ್ ಪುಡಿಯನ್ನು ಸಿಂಪಡಿಸಿದಲ್ಲಿ ಮೋಡದಲ್ಲಿರುವ ತೇವಾಂಶದ ಪ್ರಮಾಣ ಒಂದು ಮಿಲಿಯನ್ ಕ್ಯೂಬಿಕ್ ಮೀಟರ್‍ಗೆ ಏರುತ್ತದೆ. ಇದರಿಂದ ಮೋಡದಲ್ಲಿರುವ ಹನಿಗಳ ಸಾಂದ್ರತೆಯು ಅಧಿಕಗೊಂಡು ಮಳೆ ಬೀಳಲು ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ ಮೋಡಗಳು ಮೊದಲಿಗಿಂತ ಸ್ವಲ್ಪ ಮೇಲಕ್ಕೆ ಚಲಿಸುತ್ತವೆ. ಇದು ಮೋಡಬಿತ್ತನೆ ಮತ್ತು ಕೃತಕ ಮಳೆ ಬರಿಸುವ ತಂತ್ರದ ಸ್ಥೂಲ ರೂಪ.
ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಇತರೆ ದೇಶಗಳಲ್ಲಿ ಈಗಾಗಲೇ ಕೃತಕ ವಿಧಾನದಿಂದ ಮಳೆ ಸುರಿಸು ಪ್ರಯತ್ನಗಳು ನಡೆದಿದ್ದು ಅವು ಯಶಸ್ವಿಗೊಂಡಿದೆ. ಆದರೆ ಇದು ಸ್ವಲ್ಪ ದುಬಾರಿ ವಿಧಾನ. ಏಕೆಂದರೆ ಇದಕ್ಕೆ ಬೇಕಾದ ಬೆಳ್ಳಿಯ ಅಯೋಡೈಡ್ ಲವಣಕ್ಕೆ ಅಧಿಕ ಬೆಲೆ. ಅಲ್ಲದೆ ಅಧಿಕ ಪ್ರಮಾಣದಲ್ಲಿ ಈ ಲವಣವನ್ನು ಎಲ್ಲೆಲ್ಲಿ ಮೋಡಗಳು ಪ್ರಾರಂಭಿಕವಾಗಿ ರೂಪುಗೊಂಡಿರುತ್ತವೆಯೋ ಅಲ್ಲೆಲ್ಲಾ ಹೆಲಿಕ್ರ್ಯಾಪ್ಟರ್ ಮೂಲಕ ಸಿಂಪಡಿಸಬೇಕಾಗುತ್ತದೆ. ಇದ್ದುದರಲ್ಲಿ ಸೋಡಿಯಂ ಕ್ಲೋರೈಡ್ ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ. ಇದು ಒಂದು ಸಮಾಧಾನಕರ ಸಂಗತಿಯೇ ಸರಿ. ಈ ರೀತಿ ಮಳೆ ಬರಿಸಲು ಮೋಡಗಳಿರಬೇಕಾದುದು ಬಹಳ ಮುಖ್ಯ. ಅದೂ ಅಲ್ಲದೆ ಆಕಾಶದಲ್ಲಿ ತೇಲುವ ತಿಳಿಮೋಡಗಳಲ್ಲ. ತೇವಭರಿತವಾದ ಹೆಪ್ಪುಗಟ್ಟಿದ ಮೋಡಗಳಿರಬೇಕು. ಅಂತಹ ಸಂದರ್ಭಗಳಲ್ಲಿ ಮಾತ್ರ ಮೋಡ ಬಿತ್ತನೆ ಮಾಡಿ ಕೃತಕ ಮಳೆ ಬೀಳುವಂತೆ ಮಾಡಬಹುದು.
ತಜ್ಞರ ಅಭಿಪ್ರಾಯದಂತೆ ಕೃತಕ ಮಳೆ ಸುರಿಸುವ ಕ್ರಮ ಸ್ವಲ್ಪ ದುಬಾರಿ ಎನಿಸಿದರೂ ಸಹ, ಅದರಿಂದ ಶೇಕಡಾ ಅರವತ್ತರಷ್ಟು ಲಾಭ ಇದೆ. ಕೆಲವು ವಿಜ್ಞಾನಿಗಳ ಅಭಿಪ್ರಾಯದಂತೆ ಈ ತಂತ್ರದಿಂದ ವಾತಾವರಣ ಏನೇನೂ ಕಲುಷಿತಗೊಳ್ಳುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ನಮ್ಮ ಕರ್ನಾಟಕದಲ್ಲಿ ಈ ಹಿಂದೆ 1975ರಲ್ಲಿ, ಆಂಧ್ರಪ್ರದೇಶದಲ್ಲಿ 1996ರಲ್ಲಿ ಮತ್ತು ಕರ್ನಾಟಕದ ಉತ್ತರ ಕರ್ನಾಟಕದಲ್ಲಿ 2003ರಲ್ಲಿ ರೇಡಾರ್‍ಗಳನ್ನು ಸ್ಥಾಪಿಸಿ ಮೋಡಬಿತ್ತನೆ ಮಾಡಿ ಮಳೆ ಬರಿಸುವ ಕಾರ್ಯ ಮಾಡಲಾಗಿದೆ.