ಬೆಂಗಳೂರು: ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರ ಬದುಕು ಕಷ್ಟಕರವಾಗಿದೆ. ಹೀಗಾಗಿ ಇಂದು ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಯಿ ಬೆಂಗಳೂರು ಸಿಟಿ ರೌಂಡ್ಸ್ ಹಾಕಿದ್ದಾರೆ. ಮಳೆ ಹಾನಿ ಪ್ರದೇಶಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಬಿಬಿಎಂಪಿ, BWSSB ಕಾಮಗಾರಿಗಳ ಪರಿಶೀಲನೆ ನಡೆಸಿದ್ದು HSR ಲೇಔಟ್‌ನಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೂ ಭೇಟಿ ನೀಡಿದ್ದಾರೆ.
ಇಂದು ಸಿಎಂ ಸಿಟಿ ರೌಂಡ್ಸ್
ಬೊಮ್ಮನಹಳ್ಳಿ ವ್ಯಾಪ್ತಿಯ ವಿವಿಧ ಕಾಮಗಾರಿ ಸ್ಥಳಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ಬಿ ಕಾಮಗಾರಿ, ಮಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಸಿಟಿ ರೌಂಡ್ಸ್ ಹಾಕಿದ್ದಾರೆ.
BWSSB ತ್ಯಾಜ್ಯ ನೀರು ಶುದ್ದೀಕರಣಾ ಘಟಕದಿಂದ ಸಿಎಂ ಪರಿಶೀಲನೆ ಆರಂಭ ಮಾಡಿ, ಎಚ್.ಎಸ್.ಆರ್ ಲೇಔಟಿನಲ್ಲಿರುವ ತ್ಯಾಜ್ಯ ನೀರು ಶುದ್ಧೀಕರಣಾ ಘಟಕ, ಬಳಿಕ ಮಳೆಯಿಂದ ಹಾನಿಗೊಳಗಾದ ಎಚ್.ಎಸ್.ಆರ್ ಲೇಔಟ್ 6ನೇ ಸೆಕ್ಟರ್, ಮಡಿವಾಳದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನೂ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆಯೂ ಪರಿಶೀಲಿಸುತ್ತೇನೆ. ಹಂತ ಹಂತವಾಗಿ ಎಲ್ಲ ಕಡೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಘಟಕ ಪರಿಶೀಲನೆ ಬಳಿಕ ಸಿಎಂ ಬೊಮ್ಮಾಯಿ ಚರ್ಚೆ
ಸಿಎಂ ಸಿಟಿ ರೌಂಡ್ಸ್ ಶುರುವಾಗಿದ್ದು HSR ಲೇಔಟ್‌ನಲ್ಲಿರುವ STP ಘಟಕ ಪರಿಶೀಲನೆ ನಡೆಸಿದ್ದಾರೆ. ಘಟಕ ಪರಿಶೀಲನೆ ಬಳಿಕ ಸಿಎಂ ಬೊಮ್ಮಾಯಿ ಅಧಿಕಾರಿಗಳು, ಸ್ಥಳೀಯ ನಿವಾಸಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಮಳೆ ಹಾನಿಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ರಾಜಕಾಲುವೆ ಒತ್ತುವರಿಯಿಂದಾಗಿ ಸಮಸ್ಯೆಯಾಗಿದೆ. ಮಂತ್ರಿ ಸ್ಕ್ವೇರ್ ಡೆವಲಪರ್ಸ್‌ನಿಂದ ಸಮಸ್ಯೆಯಾಗ್ತಿದೆ. BBMP, BWSSB ಮಧ್ಯೆ ಸಮನ್ವಯತೆ ಇಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದು ಸಮನ್ವಯತೆಯಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.
ಇನ್ನು ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಕೆಲವು ಇಲಾಖೆಗಳ ನಡುವೆ ಸಮನ್ವಯತೆ ಕಾಪಾಡಬೇಕಿದೆ. ಈ ಸಂಬಂಧ ವಿಶೇಷ ಸಭೆ ಕರೆದು ಸೂಚನೆ ನೀಡುತ್ತೇನೆ. ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು ಸೂಚನೆ ನೀಡುವೆ. ಮಂತ್ರಿ ಡೆವಲಪರ್ಸ್ ಒತ್ತುವರಿ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ. NGT ಆದೇಶ ನೀಡಿದೆ, ಅದರಂತೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲು ಇಂಜಿನಿಯರ್‌ಗಳ ಜತೆ ಚರ್ಚೆ ಮಾಡಿದ್ದೇವೆ. ಶಾಸಕ ಸತೀಶ್ ರೆಡ್ಡಿ ಜತೆಗೂ ಸಮಸ್ಯೆಗಳಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಹಾಲಿ ಇರುವ ಚರಂಡಿಗಳಲ್ಲಿನ ಹೂಳು ತೆಗೆದು ಚರಂಡಿಗಳ ಲೆವೆಲ್ ಸರಿ ಮಾಡಲಾಗುತ್ತದೆ. STP ಘಟಕಗಳ ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮಡಿವಾಳ ಕೆರೆ ಬಳಿಯ STP ಘಟಕ ದುರಸ್ತಿಗೆ ಕ್ರಮ. ಮೇಲಿನ ಬಡಾವಣೆಗಳಿಂದ ಹರಿದು ಬರುವ ಮಳೆ ನೀರು ಹರಿಯಲು ಮತ್ತೊಂದು ಚರಂಡಿ ನಿರ್ಮಾಣ ಮಾಡಲಾಗುತ್ತೆ. ಮುಂದಿನ ಮೇ, ಜೂನ್ ಒಳಗೆ ಸಮಸ್ಯೆ ಬಗೆಹರಿಸುತ್ತೇವೆ. ಹಂತಹಂತವಾಗಿ ಸಮಸ್ಯೆ ಬಗೆಹರಿಸುತ್ತೇವೆ. ಬಿಬಿಎಂಪಿ, ಜಲಮಂಡಳಿ ಮಧ್ಯೆ ಸಮನ್ವಯತೆ ಕೊರತೆ ಇದೆ. ಸಭೆ ಕರೆದು ಅದನ್ನು ಸರಿ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು.