ಬೆಂಗಳೂರು: ರಾಜ್ಯ ಸರ್ಕಾರ ಸದ್ಯ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ. ಈ ಆಯೋಗದಿಂದ ವರದಿ ಸರ್ಕಾರಕ್ಕೆ ತಲುಪುವುದು ಯಾವಾಗ ಎಂಬುದು ಮಾತ್ರ ಫೈನಲ್ ಆಗಿಲ್ಲ. ಸಮಿತಿ ಯಾವಾಗ ರಚಿಸಲಾಗುತ್ತೆ..? ಕಾಲಮಿತಿ ಏನು..? ಎಂಬುದರ ಸಂಬಂಧ ಪ್ರಶ್ನೆ ಕೇಳಲಾಗಿತ್ತು. ಈ ಸಂಬಂಧ ಹಣಕಾಸು ಸಚಿವರು ಆಗಿರುವ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ 6 ತಿಂಗಳ ಕಾಲಮಿತಿಯಲ್ಲಿ ವರದಿಯನ್ನು ಸಲ್ಲಿಸಲು, ತ್ರಿಸದಸ್ಯರ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ದಿನಾಂಕ 19/11/2022 ರಂದು ಆದೇಶ ಹೊರಡಿಸಲಾಗಿರುತ್ತದೆ. ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸ್ವಾಯತ್ತ ಸಂಸ್ಥೆಗಳೊಂದಿಗೆ ಸಮಾಲೋಚಿಸಲು ನಿಗದಿಪಡಿಸಿರುವ ಕಾಲಾವಧಿಯನ್ನು ಪುನರ್ ಪರಿಶೀಲಿಸಿ ಆಯೋಗಕ್ಕೆ ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/23 ರಿಂದ 6 ತಿಂಗಳು ವಿಸ್ತರಿಸಿರುತ್ತದೆ ಎಂದು ತಿಳಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಹಿತದೃಷ್ಟಿಯಿಂದ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ ದಿನಾಂಕ 1/4/23ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರ ಮೂಲ ವೇತನ / ಮೂಲ ಪಿಂಚಣಿಯ ಶೇ 17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.