ಸುದ್ದಿಒನ್
ದೆಹಲಿ : ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಮಳೆಯಾಗದಿದ್ದರೂ ಯಮುನಾ ನದಿ ಉಕ್ಕಿ ಹರಿಯುತ್ತಿದೆ. ದೆಹಲಿ ಪ್ರವಾಹಕ್ಕೆ ಸಿಲುಕಿದೆ. ಎತ್ತರದ ಪ್ರದೇಶಗಳಿಂದ ಬರುತ್ತಿರುವ ಪ್ರವಾಹದಿಂದಾಗಿ ದೆಹಲಿಯು ಪ್ರವಾಹ ಭೀತಿ ಎದುರಿಸುತ್ತಿದೆ. ಹತ್ನಿಕುಂಡ್ ಬ್ಯಾರೇಜ್ ಗೇಟ್ ಗಳನ್ನು ಮೇಲೆತ್ತಿರುವುದರಿಂದ ಯಮುನಾ ನದಿಯಲ್ಲಿ ನೀರಿನ ಮಟ್ಟ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರುತ್ತಿದೆ.
ಮಳೆಯಿಂದಾಗಿ ಪ್ರವಾಹದ ನೀರಿನಿಂದ ದೆಹಲಿಯ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಮುಖ್ಯ ರಸ್ತೆಗಳು ಮತ್ತು ಬೀದಿಗಳು ನದಿಗಳಂತೆ ಕಾಣುತ್ತಿವೆ. ಈ ಪ್ರವಾಹ ದೆಹಲಿಯ ಐತಿಹಾಸಿಕ ಕಟ್ಟಡವಾದ ಕೆಂಪುಕೋಟೆಗೂ ಅಪ್ಪಳಿಸಿದೆ. ಇದರಿಂದ ಕೆಂಪು ಕೋಟೆಯ ಸುತ್ತಮುತ್ತಲಿನ ರಸ್ತೆಗಳೆಲ್ಲ ಮೊಣಕಾಲುದ್ದದಷ್ಟು ನೀರಿನಿಂದ ತುಂಬಿಕೊಂಡಿವೆ. ಕಣ್ಣು ಹಾಯಿಸಿದಷ್ಟು ನೀರು ಬಿಟ್ಟರೆ ರಸ್ತೆಯೇ ಕಾಣದಂತಾಗಿದೆ ದೆಹಲಿಯ ಸ್ಥಿತಿ.
ಯಮುನಾ ನದಿಯು ಗರಿಷ್ಠ ನೀರಿನ ಮಟ್ಟದಲ್ಲಿ ಹರಿಯುತ್ತಿದೆ. 208.66 ಮೀಟರ್ ಗರಿಷ್ಠ ನೀರಿನ ಮಟ್ಟದೊಂದಿಗೆ ಹರಿಯುತ್ತಿದ್ದು, 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. ಅಪಾಯಕಾರಿ ಮಟ್ಟಕ್ಕಿಂತ ಮೂರು ಮೀಟರ್ ಎತ್ತರದಲ್ಲಿ ಹರಿಯುತ್ತದೆ. 1978ರಲ್ಲಿ ನೀರಿನ ಮಟ್ಟ 207.49 ಮೀಟರ್ ತಲುಪಿದಾಗ ದೆಹಲಿ ಪ್ರವಾಹಕ್ಕೆ ತುತ್ತಾಗಿತ್ತು. ಮತ್ತೊಂದೆಡೆ ಭಾರಿ ಮಳೆ ಜತೆಗೆ ಪ್ರವಾಹ ಭೀತಿ ಎದುರಾಗಿದ್ದು, ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಪರಿಹಾರ ಕಾರ್ಯಾಚರಣೆಗಾಗಿ ಈಗಾಗಲೇ 12 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ಭಾನುವಾರದವರೆಗೆ ರಜೆ ಘೋಷಿಸಲಾಗಿದೆ.