ಬೆಂಗಳೂರು: ಮೋದಿ ಎಂಬ ಸರ್ ನೇಮ್ ಬಗ್ಗೆ ಮಾತನಾಡಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ಹಾಕಲಾಗಿತ್ತು. ಅದರನ್ವಯ ಎರಡು ವರ್ಷ ಜೈಲು ಶಿಕ್ಷೆ, ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಆ ಸಂಬಂಧ ಇದೀಗ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಪ್ರತಿಭಟಿಸಲು ಸಿದ್ದರಾಗಿದ್ದಾರೆ.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಜುಲೈ 12 ರಂದು ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 10 ರಿಂದ ಸಂಜೆ 6ರ ತನಕವೂ ಮೌನ ಪ್ರತಿಭಟನೆ ನಡೆಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಮಾಡಿದ ಭಾಷಣ ಮುಂದಿಟ್ಟುಕೊಂಡು ರಾಜಕೀಯವಾಗಿ ಅವರನ್ನು ಮುಗಿಸುವ ಷಡ್ಯಂತ್ರ ನಡೆಯುತ್ತಿದ್ದು ಅದನ್ನು ಖಂಡಿಸುತ್ತೇವೆ. ದೇಶದ ಪರವಾಗಿ, ಸತ್ಯದ ಪರವಾಗಿ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಅವರ ಪರವಾಗಿ ಇಡೀ ದೇಶ ಹಾಗೂ ವಿರೋಧ ಪಕ್ಷಗಳು ನಿಲ್ಲುವ ಸಂದೇಶ ರವಾನಿಸಬೇಕಾಗಿದೆ. ಭಾರತ ಜೋಡೋ ಯಾತ್ರೆಯಲ್ಲಿ ಅವರಿಗೆ ಜನರಿಂದ ಸಿಕ್ಕ ಪ್ರೀತಿ ವಿಶ್ವಾಸ, ಕರ್ನಾಟಕ ರಾಜ್ಯದಲ್ಲಿ ಅವರಿಗೆ ಸಿಕ್ಕ ಭವ್ಯ ಯಶಸ್ಸು ಸಹಿಸಲಾಗದೇ ರಾತ್ರೋರಾತ್ರಿ ಅವರ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ ಎಂದು ಆರೋಪಿಸಿದರು.