ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ, ಭೀಮಸಮುದ್ರ,
ಮೊ : 98808 36505
ಸುದ್ದಿಒನ್, ಚಿತ್ರದುರ್ಗ, (ಜು.09) : ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ಹಳ್ಳಿಗಳಿಗೂ ತಲುಪಿ ಕನ್ನಡನಾಡು ನಾಡು ನುಡಿಗಾಗಿ ಶ್ರಮಿಸುವ ಕಂಕಣ ತೊಡಬೇಕು. ಕನ್ನಡ ನಾಡು ಬಹಳ ಪುರಾತನವಾದ ಇತಿಹಾಸವನ್ನು ಹೊಂದಿದ್ದು, ಕನ್ನಡ ಪದಗಳ ಸಂಖ್ಯೆ ಪ್ರಪಂಚದ ಯಾವ ಭಾಷೆಯಲ್ಲಿ ಇಲ್ಲದ್ದಷ್ಟು ಪದ ಸಂಪತ್ತು ನಮ್ಮ ಕನ್ನಡ ನಾಡಿನಲ್ಲಿದ್ದು, ಕನ್ನಡ ಉಳಿವಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕೆಂದು ಜಿ.ಎಸ್.ಅನಿತ್ ಕುಮಾರ್ ಹೇಳಿದರು.
ತಾಲ್ಲೂಕಿನ ಭೀಮಸಮುದ್ರದ ಜಿ.ಎಮ್. ಸಭಾಂಗಣದಲ್ಲಿ ಹಿರೇಗುಂಟನೂರು ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಪದಗ್ರಹಣ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ತಾತನವರಾದ ದಿವಂಗತ ಮಲ್ಲಿಕಾರ್ಜುನಪ್ಪನವರು ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗಳನ್ನು ನಮ್ಮ ಹತ್ತಿರ ಮಾತನಾಡುತ್ತಿದ್ದರು. ಅದೇ ರೀತಿಯಾಗಿ ನಾನು ಸಹ ಬಾಲ್ಯದಲ್ಲಿ ಕನ್ನಡ ಹಾಡುಗಳನ್ನು ಸಾಹಿತ್ಯ ಸಮ್ಮೇಳನಗಳಲ್ಲಿ ಹಾಡಿದ ನೆನಪು ನನಗಿದೆ ಎಂದರು.
ಹಿರೇಗುಂಟನೂರು ಹೋಬಳಿಯಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ಮಾಡಿ ಕರ್ನಾಟಕದಲ್ಲಿಯೇ ಅತ್ಯಂತ ಕನ್ನಡ ಪರ ಚಟುವಟಿಕೆಗಳನ್ನು ನಮ್ಮ ಹಿರೇಗುಂಟನೂರು ಹೋಬಳಿಯಲ್ಲಿ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕಸಾಪ ಜಿಲ್ಲಾಧಕ್ಷ ಕೆ.ಎಂ. ಶಿವಸ್ವಾಮಿ, ಕನ್ನಡ ನಾಡು ಅತ್ಯಂತ ಪ್ರಾಚೀನವಾಗಿದ್ದು, ರಾಮಾಯಣ, ಮಹಾಭಾರತದ ಕಾಲದಲ್ಲಿಯೇ ಕನ್ನಡ ಪದಗಳು ದೊರೆಕಿದ್ದು, ಕನ್ನಡದ ನಿಘಂಟನ್ನು ಸರಿಯಾಗಿ ಮಾಡಿದರೆ ಸುಮಾರು 100000 ಕ್ಕೂ ಅಧಿಕ ಪದಗಳ ನಿಘಂಟಾಗುವುದು ಎಂದರು. ಹಾಗೂ ಕನ್ನಡವು ಶಾಸ್ತ್ರೀಯ ಭಾಷಯಾಗಿ ಮನ್ನಣೆ ಪಡೆದ ಕೆಲವೇ ಕೆಲವು ಭಾಷೆಗಳಲ್ಲಿ ಕನ್ನಡವೂ ಸಹಾ ಒಂದು. ಅದು ಪ್ರಪಂಚದ ಅತ್ಯಂತ ಶ್ರೀಮಂತ ಭಾಷೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ರಾಮಲಿಂಗ ಶ್ರೇಷ್ಟಿಯವರು ಮಾತನಾಡಿ, ಕುವೆಂಪುರವರಾದಿಯಾಗಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಂತಹ ಭಾಷೆ ಎಂದರೆ ಕನ್ನಡ ಎಂದರು.
ಸಲಹಾ ಸಮಿತಿಯ ಅಧ್ಯಕ್ಷ ರೇವಣ ಸಿದ್ದಪ್ಪ ಮಾತನಾಡಿ, ಭೀಮಸಮುದ್ರವು ಅಡಿಕೆ, ತೆಂಗು,ರಾಜಕೀಯಕ್ಕೆ ಹೆಸರುವಾಸಿಯಾದ ನಾಡಗಿದ್ದು, ಅದೇ ರೀತಿಯಾಗಿ ಕನ್ನಡ ಸಾಹಿತ್ಯವನ್ನು ಪಸರಿಸುವ ನಾಡಾಗಿ ಹೆಸರಾಗಲಿ ಎಂದು ತಿಳಿಸಿದರು.
ತಾಲ್ಲೂಕು ಕಾರ್ಯದರ್ಶಿ ವೆಂಕಟೇಶ ಮೂರ್ತಿ ಮಾತನಾಡಿ ಕನ್ನಡವೆಂದರೆ ಕೇವಲ ಭಾಷೆಯಾಗದೆ, ಕನ್ನಡಿಗರ ಉಸಿರಾಗಲಿ ಹಿರೇಗುಂಟನೂರು ಹೋಬಳಿ ಮಟ್ಟದ ಎಲ್ಲಾ ಹಳ್ಳಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದರು.
ಹಿರೇಗುಂಟನೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಮ್.ಎನ್.ರಾಮು ಜಿಲ್ಲಾ ಪುರಸ್ಕೃತ ಶಿಕ್ಷಕರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಭೀಮಸಮುದ್ರದಲ್ಲಿ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಎದೆ ತುಂಬಿ ಹಾಡುವೆನು ಗಾಯಕರಾದ ಬಿ.ವಿ.ಎಮ್. ಪ್ರಭು ರವರು ತಮ್ಮ ಕನ್ನಡ ಹಾಡುಗಳನ್ನು ಹಾಡಿ ರಂಜಿಸಿದರು.
ಈ ಸಂದರ್ಭದಲ್ಲಿ ಬಿ.ಕೆ. ಕಲ್ಲಪ್ಪ, ಮಹೇಶ್, ಡಾ. ಮಹೇಶ್, ರಾಜು, ಜಿ.ಎಸ್. ಸಿದ್ದೇಶ್, ಆನಂದಪ್ಪ ಹಾಗೂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.