ಸುದ್ದಿಒನ್, ಚಿತ್ರದುರ್ಗ, (ಜು.07) : ಪ್ರತಿ ಬಾರಿ ಪ್ರಸ್ತಾಪ ಆಗಿ ಮರೆಯಾಗುತ್ತಿದ್ದ ಮೆಡಿಕಲ್ ಕಾಲೇಜ್ ಆರಂಭಕ್ಕೆ ತರಗತಿಗೆ
ಪ್ರವೇಶಕ್ಕೆ ಮುಂದಾಗಲಾಗುವುದು ಎನ್ನುವ ಮೂಲಕ ಚಿತ್ರದುರ್ಗ ಜಿಲ್ಲೆಯ ಜನರ ಬಹುದಿನಗಳ ಕನಸನ್ನು ಸಿದ್ದರಾಮಯ್ಯ
ನನಸು ಮಾಡಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಬಿ.ಎನ್.ಚಂದ್ರಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಇಂದು ಮಂಡಿಸಿದ ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಮೊಳಕಾಲ್ಮೂರು ರೇಷ್ಮೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಆರಂಭಕ್ಕೆ ಕ್ರಮಕೈಗೊಂಡಿರುವುದು. ಇನ್ನೂ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತರು, ಮಾಜಿ ದೇವದಾಸಿ ಹಾಗೂ ಮಂಗಳಮುಖಿಯರನ್ನು ಗೃಹಲಕ್ಷ್ಮೀ ಯೋಜನೆ ವ್ಯಾಪ್ತಿಗೆ ತಂದಿರುವುದು ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾಗಿದೆ.
ಒಟ್ಟಾರೆ, ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರ ಹಾಗೂ ಎಸ್ಸಿ, ಎಸ್ಟಿ, ಹಿಂದುಳಿದ, ಅಲ್ಪಸಂಖ್ಯಾತ ಸೇರಿ ಎಲ್ಲ ವರ್ಗದ ಜನರನ್ನು ಮುಖ್ಯವಾಹಿನಿಗೆ ತರಲು ಕ್ರಮಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ಬಹುಪಾಲು ಅಂಶಗಳನ್ನು ಮೊದಲ ಬಜೆಟ್‌ನಲ್ಲಿಯೇ ಈಡೇರಿಸುತ್ತಿರುವುದು ಐತಿಹಾಸಿಕ ನಡೆ ಆಗಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ತಪ್ಪುವುದಿಲ್ಲ ಎಂಬುದನ್ನು ಬಜೆಟ್‌ನ ಪ್ರತಿ ಪುಟಗಳು ಕೂಗಿ ಹೇಳುತ್ತವೆ.
ಬುದ್ದ, ಬಸವ ಅಂಬೇಡ್ಕರ್ ಅನಯಾಯಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ದಾಖಲೆಯಾಗಿ 14 ಬಾರಿ ಬಜೆಟ್ ಮಂಡಿಸಿದ್ದು ಅವರ ಸಮಸಮಾಜದ ಕನಸು ಕಾಯಕ ಹಾಗೂ ದಾಸೋಹದ ಅಶಯಗಳನ್ನು ಗಮನಿಸಿದರೆ ಅವರ ಅಪಾರವಾದ ಅನುಭವ ಅಡಕವಾಗಿರುವುದು ಕಾಣುತ್ತೇವೆ ಎಂದು ತಿಳಿಸಿದ್ದಾರೆ.