ಹಾನಗಲ್: ಈಗ ಪೆಟ್ರೋಲ್ ಬೆಲೆ 110, ಡೀಸೆಲ್ ಬೆಲೆ 100, ಗ್ಯಾಸ್ ಬೆಲೆ 950 ರೂಪಾಯಿ ಆಗಿದೆ. ಬಡವರು ಹೇಗೆ ಬದುಕಬೇಕು? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದು ಯುವಕರಿಗೆ ಮೋದಿ ಭರವಸೆ ನೀಡಿದ್ರು, ಪಾಪ ಯುವಕರು ನಂಬಿ ಓಟು ಹಾಕಿ ಗೆಲ್ಲಿಸಿದ್ರು, ಈಗ ಉದ್ಯೋಗ ಕೇಳಿದ್ರೆ ಪಕೋಡ ಮಾರಿ ಎಂದು ಬಿಟ್ಟಿ ಸಲಹೆ ಕೊಡ್ತಾರೆ ಎಂದು ಮಾಝಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ಈ ವೇಳೆ ಮಾತನಾಡಿದ ಅವರು, ಹೋಗಲಿ ಈಗ ಪಕೋಡಾ ಆದ್ರೂ ಮಾರಲು ಸಾಧ್ಯವಿದೆಯಾ? ಅಡುಗೆ ಎಣ್ಣೆ ಬೆಲೆ 200 ರೂಪಾಯಿ ಆಗಿದೆ. ಮೋದಿ ಮೋದಿ ಎಂದವರಿಗೆ ತಿರುಪತಿ ನಾಮ ಹಾಕಿದ್ದಾರೆ. ಅದಕ್ಕೆ ಈಗ ಯಾರೂ ಸಾರ್ವಜನಿಕ ಸಭೆಗಳಲ್ಲಿ ಮೋದಿ ಮೋದಿ ಅಂತ ಕೂಗಾಡ್ತಿಲ್ಲ ಎಂದರು.
ಇನ್ನೂ ಕೊರೊನಾ ಓಡಿಸಲು ಲಸಿಕೆ ನೀಡುವ ಬದಲು ಜನರಿಗೆ ದೀಪ ಹಚ್ಚಿ, ಗಂಟೆ ಬಾರಿಸಿ ಎಂದು ದಾರಿ ತಪ್ಪಿಸಿದರು. ಮೋದಿ ತಮಗೆ 56 ಇಂಚಿನ ಎದೆ ಇದೆ ಎನ್ನುತ್ತಿದ್ದರು, ಎದೆ ಎಷ್ಟು ಇಂಚಿದೆ ಎಂಬುದು ಮುಖ್ಯವಲ್ಲ. ಆದ್ರೆ ಆ ಎದೆಯೊಳಗೆ ಬಡವರಿಗಾಗಿ, ಶೋಷಿತರಿಗಾಗಿ ಮಿಡಿಯುವ ತಾಯಿ ಹೃದಯ ಇದೆಯಾ? ಎಂಬುದು ಮುಖ್ಯ. ಮೋದಿಯನ್ನು, ಆರ್.ಎಸ್.ಎಸ್ ಅನ್ನು ಹೊಗಳಿ ಹೊಗಳಿ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾರೆ. ಇವರು ರಿಮೋಟ್ ಮುಖ್ಯಮಂತ್ರಿ, ಇವರನ್ನು ಬಿಜೆಪಿ ಕಂಟ್ರೋಲ್ ಮಾಡುತ್ತಿದೆ.
ಒಂದು ಸಾವಿರ ಕೋಟಿ ಬೆಲೆಬಾಳುವ ಜಮೀನನ್ನು ಕೇವಲ 50 ಕೋಟಿಗೆ ಆರ್.ಎಸ್.ಎಸ್ ಮೂಲದ ಶಿಕ್ಷಣ ಸಂಸ್ಥೆಗೆ ನೀಡಿದ್ದಾರೆ. ಇದು ಬಹುದೊಡ್ಡ ಹಗರಣ. ಇದನ್ನು ಕೇಳಿದ್ರೆ ಸಂಘಪರಿವಾರದವರು ದೇಶಭಕ್ತರು ಎನ್ನುತ್ತಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಒಬ್ಬನೇ ಒಬ್ಬ ಆರ್.ಎಸ್.ಎಸ್ ನಾಯಕನ ಹೆಸರು ಹೇಳಲಿ ನೋಡೋಣ. ಇಂಥವರು ಬೇರೆಯವರಿಗೆ ದೇಶಭಕ್ತಿ ಪಾಠ ಮಾಡ್ತಾರೆ ಎಂದು ಹೇಳಿದರು.