ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಜು.06) : ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಸಾಹಿತ್ಯ, ಸಾಂಸ್ಕೃತಿಕ ಜಿಲ್ಲಾ ಮಟ್ಟದ ಕಲೋತ್ಸವವನ್ನು ಪ್ರಥಮ ಬಾರಿಗೆ ಚಿತ್ರದುರ್ಗದಲ್ಲಿ ಜು. 30 ರಂದು ಕ್ರೀಡಾಭವನದಲ್ಲಿ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ಕೆ.ರವೀಂದ್ರಶೆಟ್ಟಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷನಾಗಿ ಒಂದು ವರ್ಷ ಆರು ತಿಂಗಳ ಕಾಲ ಕೆಲಸ ಮಾಡಿ ರಾಜ್ಯಾದ್ಯಂತ ಪ್ರವಾಸ ಮಾಡಿದಾಗ ಅಲೆಮಾರಿ ಜನಾಂಗದವರು ಅತ್ತ ಡೇರೆಯೂ ಅಲ್ಲ. ಇತ್ತ ಟೆಂಟೂ ಅಲ್ಲದೆ ಮಳೆ ಗಾಳೆ ಚಳಿಯಲ್ಲಿ ಜೀವಿಸುತ್ತಿರುವ ಹೀನಾಯ ಪರಿಸ್ಥಿತಿಯನ್ನು ನೋಡಿದ್ದೇನೆ. ಧ್ವನಿ ಇಲ್ಲದ ಈ ಜನಾಂಗಕ್ಕೆ ಶಕ್ತಿ ತುಂಬುವುದಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆಂದು ಹೇಳಿದರು.
ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಜನಾಂಗದ ಪ್ರತಿಭಾವಂತರು, ಸಾಧಕರನ್ನು ಗುರುತಿಸಿ ಕಲೋತ್ಸವದಲ್ಲಿ ಸನ್ಮಾನಿಸಲಾಗುವುದು. ನಾನು ಅಭಿವೃದ್ದಿ ನಿಗಮದ ಅಧ್ಯಕ್ಷನಾಗಿದ್ದಾಗ ಡೇರೆ ಮುಕ್ತ ಕರ್ನಾಟಕವನ್ನಾಗಿ ಮಾಡುವುದಾಗಿ ಹೇಳಿದ್ದೆ. ಮಾತನಾಡುವುದು ಸುಲಭ. ಆದರೆ ಮಾಡುವುದು ಕಷ್ಟ. ಇದಕ್ಕೆ ಸರ್ಕಾರ, ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿಯಿರಬೇಕು.
ಈ ಹಿಂದೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಕಲೋತ್ಸವವನ್ನು ಮಾಡಿದ್ದೆವು. ಈಗ ಚಿತ್ರದುರ್ಗದಲ್ಲಿ ಜಿಲ್ಲಾ ಮಟ್ಟದ ಕಲೋತ್ಸವ ಹಮ್ಮಿಕೊಂಡಿದ್ದು, 30 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಶಾಸಕರು, ಒಕ್ಕೂಟದ ಅಧ್ಯಕ್ಷ ತುಕಾರಾಮ ವಾಸ್ಟರ್ ಇನ್ನು ಅನೇಕರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದಲ್ಲಿ ಬರುವ 46 ಜಾತಿಗಳನ್ನು ಗುರುತಿಸಿ ಅವರಲ್ಲಿರುವ ಪ್ರತಿಭೆಯನ್ನು ಕಲೋತ್ಸವದಲ್ಲಿ ಹೊರತರಲಾಗುವುದು ಎಂದರು.
ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಓ.ಪ್ರತಾಪ್‍ಜೋಗಿ ಮಾತನಾಡಿ ಕೆ.ರವೀಂದ್ರಶೆಟ್ಟಿರವರು ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿದ್ದ ಇಡೀ ರಾಜ್ಯದಲ್ಲಿ ಸುತ್ತಾಡಿ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಸಾಕಷ್ಟು ಸಮಸ್ಯೆಗಳನ್ನು ಆಲಸಿದ್ದಾರೆ.
ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗದಲ್ಲಿ ಸಂಕಷ್ಟದಲ್ಲಿರುವ ನಮ್ಮ ಜನಾಂಗಕ್ಕೆ ಶಕ್ತಿ ತುಂಬಬೇಕೆಂಬುದು ಅವರ ಮಹದಾಸೆ. ಹಾಗಾಗಿ ಇದೆ ತಿಂಗಳ 30 ರಂದು ಚಿತ್ರದುರ್ಗದಲ್ಲಿ ಕಲೋತ್ಸವ ನಡೆಸಲಾಗುವುದು ಎಂದು ಹೇಳಿದರು.
ಅಲೆಮಾರಿ ಅರೆಅಲೆಮಾರಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರು, ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪಡೆದವರನ್ನು ಕಲೋತ್ಸವದಲ್ಲಿ ಸನ್ಮಾನಿಸಲಾಗುವುದೆಂದರು.
ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆಅಲೆಮಾರಿ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಪ್ರಕಾಶ್ ಎಂ. ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಇಂದಿರಾ ಗುರುಸ್ವಾಮಿ, ರಾಜ್ಯ ಉಪಾಧ್ಯಕ್ಷ ಮಂಜುನಾಥ, ರಾಮು ಗೋಸಾಯಿ, ಲಕ್ಷ್ಮಿಕಾಂತ್‍ಯಾದವ್, ಕುಬೇರ, ಮಧುಜೋಗಿ, ಚಿಕ್ಕಣ್ಣಯಾದವ್, ಇಂದಿರಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.