ಹಾನಗಲ್: ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಭಾಗ್ಯ, ಸಾಲ ಮನ್ನಾ, ಶಾದಿ ಭಾಗ್ಯ, ಪಶು ಭಾಗ್ಯ, ಇಂದಿರಾ ಕ್ಯಾಂಟೀನ್, ಅನುಗ್ರಹ ಮುಂತಾದ ಯೋಜನೆಗಳನ್ನು ಕೈಬಿಟ್ಟಿದ್ದಾರೆ ಎಂದು ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ಈ ವೇಳೆ ಮಾತನಾಡಿದ ಅವರು, ಅವರನ್ನ ಈ ಬಗ್ಗೆ ಕೇಳಿದ್ರೆ ಕೊರನಾಗೆ ಖರ್ಚು ಮಾಡಿದೀವಿ , ನಮ್ಮ ಬಳಿ ದುಡ್ಡಿಲ್ಲ ಎನ್ನುತ್ತಾರೆ. ಈ ಸರ್ಕಾರ ಕೊರೊನಾ ಕಾಲದಲ್ಲೂ ಲೂಟಿ ಮಾಡಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಇಂದಿರಾ ಕ್ಯಾಂಟೀನ್ ಆರಂಭ ಮಾಡುತ್ತೇವೆ ಎಂದರು.
ನಾನು ಮುಖ್ಯಮಂತ್ರಿ ಆಗುವಾಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನ ಕೇವಲ 400 ಕೋಟಿ ರೂಪಾಯಿ ಇತ್ತು, ನನ್ನ ಕಡೇ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದ ಅನುದಾನ 3,100 ಕೋಟಿ. ಬಡವರಿಗೆ ಅಕ್ಕಿ ಕೊಟ್ಟು ಜನರನ್ನು ಸೋಮಾರಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳ್ತಾರೆ. ಹಸಿವಿನ ಸಂಕಟ ಗೊತ್ತಿಲ್ಲದವರು ಮಾತ್ರ ಇಂಥಾ ಹೇಳಿಕೆ ಕೊಡಲು ಸಾಧ್ಯ.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಏಳು ವರ್ಷ ತುಂಬಿದೆ. ಸುಳ್ಳು ಭರವಸೆ ನೀಡೋದು ಬಿಟ್ಟು ಜನರಿಗೆ ಬೇರೇನೂ ಮಾಡಿಲ್ಲ. ಅಚ್ಚೇ ದಿನ್ ಬರುತ್ತೆ ಅಂತ ಹೇಳಿದ್ರು, ಬಂತಾ? ಸಬ್ ಕ ಸಾಥ್, ಸಬ್ ಕ ವಿಕಾಸ್ ಅಂತ ಬಾಯಲ್ಲಿ ಹೇಳ್ತಾರೆ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡ್ತಾರೆ. ಎಲ್ಲಾ ಧರ್ಮದ, ಜಾತಿಯ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಏಕೈಕ ಪಕ್ಷ ಕಾಂಗ್ರೆಸ್. ಕಾರಣ ನಾವು ಸಂವಿಧಾನದ ಹಾದಿಯಲ್ಲಿ ನಡೆಯುವವರು. ಸಂಪತ್ತಿನ ಸಮಾನ ಹಂಚಿಕೆ, ಸರ್ವರಿಗೂ ಸಮಾನ ಅವಕಾಶ, ಪರಸ್ಪರ ಪ್ರೀತಿ ವಿಶ್ವಾಸ ದಿಂದ ಬದುಕಬೇಕು ಎಂದು ನಂಬಿದವರು ನಾವು. ಮಹಾತ್ಮ ಗಾಂಧಿಯವರ ಚಿಂತನೆಗಳು ನಮಗೆ ಪ್ರೇರಣೆ.
ದೇಶದ ಸುಮಾರು 14% ಜನಸಂಖ್ಯೆ ಇರುವ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಒಬ್ಬನೇ ಒಬ್ಬ ಶಾಸಕನಾಗಲೀ, ಸಂಸದನಾಗಲೀ, ಮಂತ್ರಿಯಾಗಲೀ ಬಿಜೆಪಿ ಪಕ್ಷದಲ್ಲಿ ಇಲ್ಲ. ಯಾಕೆ ಅವರು ದೇಶದ ನಾಗರಿಕರಲ್ಲವೇ? ಯಡಿಯೂರಪ್ಪ ಅವರ ಸರ್ಕಾರ ಹಾವೇರಿಯಲ್ಲಿ ರೈತರ ಮೇಲೆ ಗುಂಡು ಹಾರಿಸಿ ಕೊಲ್ಲಿಸಿತ್ತು. ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರ ಮಗ ಕಾರು ಹತ್ತಿಸಿ, ನಾಲ್ವರು ರೈತರನ್ನು ಹತ್ಯೆ ಮಾಡಿದ್ದಾನೆ. ಇವರನ್ನು ಕೊಲೆಗಡುಕರು, ಗೂಂಡಾಗಳ ಸರ್ಕಾರ ಅನ್ನದೆ ಇನ್ನೇನು ಹೇಳಬೇಕು ಎಂದು ಪ್ರಶ್ನಿಸಿದರು.