ಸುದ್ದಿಒನ್ ಸ್ಪೋರ್ಟ್ಸ್ ಡೆಸ್ಕ್
ಇಂಡಿಯನ್ ಪ್ರೀಮಿಯರ್ ಲೀಗ್ IPL ಈ ವರ್ಷ 16ನೇ ಆವೃತ್ತಿಯನ್ನು ಯಶಸ್ವಿಯಾಗಿ ಪೂರೈಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಜಿಯೋ ಸಿನಿಮಾ ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದ್ದು ಎಲ್ಲರಿಗೂ ತಿಳಿದಿದೆ. ಜಿಯೋ ಸಿನಿಮಾ ಮೂಲಕ ಕ್ರಿಕೆಟ್ ಪ್ರೇಕ್ಷಕರಿಗೆ ಐಪಿಎಲ್ 2023 ರ ಪಂದ್ಯಗಳನ್ನು ಉಚಿತವಾಗಿ ಪ್ರಸಾರ ಮಾಡಲಾಯಿತು. ಎರಡು ತಿಂಗಳುಗಳ ಕಾಲ ಉಚಿತವಾಗಿ ಪಂದ್ಯಗಳನ್ನು ವೀಕ್ಷಿಸಲಾಯಿತು. ಆದರೆ, ಪ್ರೇಕ್ಷಕರಿಗೆ ಉಚಿತವಾಗಿ ತೋರಿಸಿದರೂ ಮುಖೇಶ್ ಅಂಬಾನಿಗೆ ನಷ್ಟವೇನೂ ಆಗಿಲ್ಲ ಬದಲಾಗಿ ಕೋಟಿ ಕೋಟಿ ರೂಪಾಯಿಗಳ ಆದಾಯ ಬಂದಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ ಐಪಿಎಲ್ 2023 ರ ಆದಾಯದ ಬಗ್ಗೆ ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದೆ.
ಐಪಿಎಲ್ 2023 ರ ಆವೃತ್ತಿಯ ಜಾಹೀರಾತು ಆದಾಯ ಬರೋಬ್ಬರಿ 10,120 ಕೋಟಿ ರೂಪಾಯಿ ಎಂದು ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ರೆಡ್‌ಸೀರ್ ಸ್ಟ್ರಾಟಜಿ ಕನ್ಸಲ್ಟೆಂಟ್ಸ್ ವರದಿಯಲ್ಲಿ ತಿಳಿಸಿದೆ.
ಇದರಲ್ಲಿ ಬಿಸಿಸಿಐ, ಫ್ರಾಂಚೈಸಿ ಮಾಲೀಕರು ಮತ್ತು ಪ್ರಸಾರಕರು ನೇರವಾಗಿ ಶೇ.65ರಷ್ಟು ಗಳಿಸಿದರೆ ಉಳಿದ ಶೇ.35ರಷ್ಟು ಆದಾಯ ಪರೋಕ್ಷವಾಗಿ ಬಂದಿತ್ತು. ಈ ವರದಿಯ ಪ್ರಕಾರ, ಮುಖೇಶ್ ಅಂಬಾನಿ ಅವರ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕು ಹೊಂದಿರುವ ಜಿಯೋ ಸಿನಿಮಾಸ್ ಮತ್ತು ಟಿವಿ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಒಟ್ಟಾಗಿ ಜಾಹೀರಾತುಗಳ ಮೂಲಕ ರೂ. 4700 ಕೋಟಿ ಗಳಿಸಿವೆ. ಮತ್ತೊಂದೆಡೆ, ಫ್ರಾಂಚೈಸಿಗಳು ರೂ. 1450 ಕೋಟಿ ಪಡೆದರೆ ಬಿಸಿಸಿಐ ರೂ. 430 ಕೋಟಿ ಬಂದಿವೆ.
ಬಿಸಿಸಿಐ, ಬ್ರಾಡ್‌ಕಾಸ್ಟರ್‌ಗಳು, ಫ್ರಾಂಚೈಸಿಗಳು ಜಾಹೀರಾತುಗಳಿಂದ ಬರುವ ಒಟ್ಟು ಆದಾಯದ ಶೇ.65ರಷ್ಟು ನೇರವಾಗಿ ಗಳಿಸಿದರೆ, ಉಳಿದ ಶೇ.35ರಷ್ಟು ಮಂದಿ ಪರೋಕ್ಷ ಆದಾಯ ಬಂದಿದೆ. ಉಳಿದ 35 ಪ್ರತಿಶತ ಆದಾಯವು ಸಾಮಾಜಿಕ ಮಾಧ್ಯಮ, ಸಾಂಪ್ರದಾಯಿಕ ಮಾಧ್ಯಮ ಮತ್ತು ಇತರ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳಿಂದ ಬಂದಿದೆ ಎಂದು ವರದಿ ಹೇಳಿದೆ.
ಐಪಿಎಲ್ 2023 ರಲ್ಲಿ ಡ್ರೀಮ್ 11 ರಂತಹ ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್‌ಗಳು ರೂ. 2,800 ಕೋಟಿ ಗಳಿಸಿದೆ ಎಂದು ವರದಿಯಲ್ಲಿ ತಿಳಿಸಿದೆ. ಒಟ್ಟು 61 ಮಿಲಿಯನ್ ಜನರು ಫ್ಯಾಂಟಸಿ ಗೇಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾಗವಹಿಸಿದ್ದಾರೆ.
2022 ರ ಆವೃತ್ತಿಯಲ್ಲಿ ಇದು ರೂ. 2,250 ಕೋಟಿಗಳಷ್ಟಿತ್ತು. ಈ ಆವೃತ್ತಿಯಲ್ಲಿ 24 ಪ್ರತಿಶತದಷ್ಟು ಹೆಚ್ಚಾಗಿದೆ.
ಐಪಿಎಲ್ 2023ರ ಪಂದ್ಯಗಳು ರೋಚಕವಾಗಿದ್ದವು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಕಳೆದ ವರ್ಷ ನಿರೀಕ್ಷೆಯನ್ನು ಹುಸಿಗೊಳಿಸಿ ಲೀಗ್ ಹಂತದಲ್ಲೇ ಮನೆಗೆ ತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಸಿಂಹಸ್ವಪ್ನವಾಗಿ ಸಿಡಿದೆದ್ದಿದೆ. ಮತ್ತೆ ತಂಡದ ಸಾರಥ್ಯ ವಹಿಸಿದ ಮಹೇಂದ್ರ ಸಿಂಗ್ ಧೋನಿ ತಮ್ಮ ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023 ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.