ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಜುಲೈ.02) : ವಚನಕಾರರು ಸಮಾಜವನ್ನು ತಿದ್ದುವುದಕ್ಕೆ ನೀಡಿದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನತೆಗೆ ಪರಿಚಯಿಸಿದ ಡಾ.ಫ.ಗು.ಹಳಕಟ್ಟಿಯವರ ಸಾಹಿತ್ಯ ಸೇವೆ ಅವಿಸ್ಮರಣೀಯ ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಡಾ.ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯ ಮತ್ತು ವಚನಕಾರರ ಬಗ್ಗೆ ಅಮೂಲಾಗ್ರವಾಗಿ ತಿಳಿಯಲು ಡಾ.ಫ.ಗು.ಹಳಕಟ್ಟಿಯವರ ಶ್ರಮದಿಂದ ಸಾಧ್ಯವಾಗಿದೆ. ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ತಾಳೆಗರಿಗಳನ್ನು, ವಚನಗಂಟುಗಳನ್ನು ಮನೆ ಮನೆಗಳಿಗೆ ತೆರಳಿ ಹುಡುಕಿ, ಸಂಗ್ರಹಿಸಿದ ಡಾ.ಫ.ಗು.ಹಳಕಟ್ಟಿಯವರು ಗ್ರಂಥರೂಪದಲ್ಲಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರಳಿ ಬಸವರಾಜ್ ಮಾತನಾಡಿ, 12ನೇ ಶತಮಾನದ ಶಿವ ಶವರಣರು ಜಾತಿ ಮತ್ತು ಧರ್ಮಗಳ ಎಲ್ಲೇ ಮೀರಿ ಲಿಂಗ, ವರ್ಣ, ವರ್ಗ ರಹಿತವಾದ ಸಮಾಜವನ್ನು ಕಟ್ಟುವನಿಟ್ಟಿನಲ್ಲಿ ಶ್ರಮಿವಹಿಸಿ, ಹಿತವಾದ ಬದುಕು ನಡೆಸಿದ ಅನುಭಾವ ಶರಣರು. ಇಂತಹ ಶರಣ ಪರಂಪರೆ 12ನೇ ಶತಮಾನದ ನಂತರ ಕಾಲಗರ್ಭದಲ್ಲಿ ವಚನಗಳಿಗೆ ದೂಳು ಹಿಡಿದು ವಚನಕಾರರ ಬದುಕಿಗೆ ಒಂದಿಷ್ಟು ಮಂಕುಕವಿದಂತಾಯಿತು. ತದನಂತರ ಅಲ್ಲೊಂದು ಇಲ್ಲೊಂದು ಸಂಶೋಧನೆಗಳಾದ ಮೇಲೆ ಅದಕ್ಕೆ ಪೂರ್ಣಸ್ವರೂಪದ ಬೆಳಕನ್ನು, ಕ್ಷಕಿರಣ ಬೀರಲು ಅವತರಿಸಿ ಬಂದ ವ್ಯಕ್ತಿ ಡಾ.ಫ.ಗು.ಹಳಕಟ್ಟಿಯರು ಎಂದರು.
ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಎಂಬ ವ್ಯಕ್ತಿ ಒಂದು ಶಕ್ತಿಯಾಗಿ, ಒಂದು ವಿಶ್ವವಿದ್ಯಾಲಯ, ಸರ್ಕಾರಗಳು ಮಾಡದೇ ಇರುವ ಬಹುದೊಡ್ಡ ಕಾರ್ಯವನ್ನು ಕೈಗೆತ್ತಿಕೊಂಡು ಹರಕಲು ಗುಡಿಸಲು, ಮುರುಕಲು ಮನೆ, ಹರಿದ ಚಾಪೆ, ಅಂಗಿ, ಮೇಲೊಂದು ಟೋಪಿ, ಕಚ್ಚೆ ಪಂಚೆ ಹಾಕಿಕೊಂಡು ಫಕೀರನಂತೆ ಸೈಕಲ್ ಮೇಲೆ ಕುಳಿತು ಹಳ್ಳಿಹಳ್ಳಿಗಳನ್ನು, ಮಠಮಾನ್ಯಗಳನ್ನು, ದೇವಾಲಯಗಳನ್ನು ಸುತ್ತಿ ತನ್ನ ಬದುಕನ್ನು ವಚನ ಸಾಹಿತ್ಯಕ್ಕಾಗಿ ಧಾರೆ ಎರೆದ ಮಹಾನ್ ಚೇತನ್ ಎಂದು ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಕನ್ನಡ ವಚನ ಸಾಹಿತ್ಯದ ಸಾವಿರಾರು ವಚನಗಳನ್ನು ಡಾ.ಫ.ಗು.ಹಳಕಟ್ಟಿಯವರು ಸಂಗ್ರಹಿಸಿ, ಸಂರಕ್ಷಣೆ ಮಾಡಿದ್ದಾರೆ.
ಫ.ಗು.ಹಳಕಟ್ಟಿಯವರ ವೈಯಕ್ತಿಕ ಜೀವನ ದುಃಖಮಯವಾಗಿದ್ದೂ ಸಹ ವಚನಗಳನ್ನು ಮುದ್ರಿಸಲು, ಮುದ್ರಣಾಲಯ ಸ್ಥಾಪನೆಗೆ ಮನೆ ಮಾರಾಟ ಮಾಡಿ, ಕೊನೆಯವರೆಗೂ ಬಡತನದಲ್ಲೇ ಬದುಕಿದವರು ಎಂದರು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಸನ್ಮಾನ: ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಅಂಗವಾಗಿ ವಚನ ಸಾಹಿತ್ಯ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರೌಢಶಾಲಾ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
ಪ್ರೌಢಶಾಲಾ ವಿಭಾಗದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಾದ ಪ್ರಿಯದರ್ಶಿನಿ ಪ್ರೌಢಶಾಲೆಯ ಎ.ಲತಾ (ಪ್ರಥಮ), ಬಾಲಕಿಯರ ಪ್ರೌಢಶಾಲೆಯ ಎಸ್.ಸೌಮ್ಯಶ್ರಿ (ದ್ವಿತೀಯ) ಬೃಹನ್ಮಠ ಪ್ರೌಢಶಾಲೆಯ ಎಂ.ಮಾನಸ (ತೃತೀಯ) ಸ್ಥಾನ ಪಡೆದಿದ್ದಾರೆ.
ಪದವಿಪೂರ್ವ ವಿಭಾಗದಲ್ಲಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಜಿ.ಎಸ್.ಸುದರ್ಶನ್ (ಪ್ರಥಮ), ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಕಾಶ್ (ದ್ವಿತೀಯ) ಹಾಗೂ ಚಿನ್ಮೂಲಾದ್ರಿ ಪದವಿಪೂರ್ವ ಕಾಲೇಜಿನ ಎಸ್.ಎಚ್.ಸಾಕ್ಷಿ (ತೃತೀಯ) ಸ್ಥಾನ ಪಡೆದಿದ್ದಾರೆ. ಪದವಿ ವಿಭಾಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್.ಸುಮಾ (ಪ್ರಥಮ) ಜೆ.ಸಿ.ಅಂಜಲಿ (ದ್ವಿತೀಯ) ಹಾಗೂ ಎ.ಎನ್.ಸೃಷ್ಠಿ (ತೃತೀಯ) ಸ್ಥಾನ ಪಡೆದಿದ್ದಾರೆ.
ಗಮನ ಸೆಳೆದ ಕವಿಗೋಷ್ಠಿ: ಡಾ.ಫ.ಗು.ಹಳಕಟ್ಟಿ ಹಾಗೂ ವಚನ ಸಾಹಿತ್ಯ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಸದಸ್ಯರಿಂದ ನಡೆದ ಕವಿಗೋಷ್ಠಿ ಗಮನ ಸೆಳೆಯಿತು.
ಚಂದ್ರಿಕಾ ಸುರೇಶ್, ಮೀರಾ ನಾಡಿಗ್, ರೀನಾ ವೀರಭದ್ರಪ್ಪ, ಗೀತಾ ಭರಮಸಾಗರ, ಪೂಜಾ ಅಜಯ್, ತಿಪ್ಪಮ್ಮ, ನಾಗರತ್ನ ಶಿವಣ್ಣ, ಶೈಲಜಾ ಜಯಕುಮಾರ್ ಸೇರಿದಂತೆ ಸುಮಾರು 10 ಕವಿಯತ್ರಿಯರಿಂದ ಕವಿಗೋಷ್ಠಿ ನಡೆಯಿತು.
ಸಂಭವಾಮಿ ಯುಗೇ ಯುಗೇ, ನಿಷ್ಠಾವಂತ, ವಚನ ಗುಮ್ಮಟ, ಸರಳ ಸಜ್ಜನ ಹಳಕಟ್ಟಿ, ವಚನ ಸಾಹಿತ್ಯದ ಸರದಾರ ಎಂಬ ಶೀರ್ಷಿಕೆಗಳುಳ್ಳ ಡಾ.ಫ.ಗು.ಹಳಕಟ್ಟಿ ಹಾಗೂ ವಚನ ಸಾಹಿತ್ಯದ ಕುರಿತ ಕವನ ವಾಚನ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಮಳಲಿ, ಎಸ್.ನಿಜಲಿಂಗಪ್ಪ ಟ್ರಸ್ಟ್‍ನ ಎಸ್.ಷಣ್ಮುಖಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಕಾರ್ಯದರ್ಶಿ ಮಾಲತೇಶ್ ಅರಸ್, ಡಾ.ಫ.ಗು.ಹಳಕಟ್ಟಿ ವಂಶಸ್ಥರಾದ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.