ಸುದ್ದಿಒನ್, ಚಿತ್ರದುರ್ಗ, (ಜು.02) : ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಗ್ರಾಮೀಣ ಪ್ರದೇಶದಲ್ಲಿಯೂ ಕೈಗೊಳ್ಳಲಾಗುವುದು ಎಂದು ಚಿತ್ರದುರ್ಗ ತಾಲ್ಲೂಕು ಕಸಾಪ ಅಧ್ಯಕ್ಷ ರಾಮಲಿಂಗಶೆಟ್ಟಿ ಹೇಳಿದ್ದಾರೆ.
ಭಾನುವಾರ ತಾಲ್ಲೂಕಿನ ತುರುವನೂರು ಹೋಬಳಿಯ ಕೂನಬೇವು ಗ್ರಾಮದಲ್ಲಿ ಏರ್ಪಡಿಸಿದ್ದ ಕವನ ಸಂಕಲನ ಬಿಡುಗಡೆ ಮತ್ತು ಹೋಬಳಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಸಾಪ ಇದೀಗ ಹೋಬಳಿ ಘಟಕಗಳನ್ನು ಸ್ಥಾಪಿಸುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈಗಾಗಲೇ ಭರಮಸಾಗರ ಮತ್ತು ತುರುವನೂರು ಹೋಬಳಿ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.
ಇದೇ ರೀತಿಯಲ್ಲಿ ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿ ಘಟಕಗಳನ್ನು ರಚಿಸಲಾಗುವುದು. ಸಿರಿಗೆರೆಯ ಯುವ ಲೇಖಕ ಟಿ.ಆರ್.ಅವಿನಾಶ್ ತತ್ವ ಸಾರುವ ಪೈರು ಎಂಬ ಕವನ ಸಂಕಲನ ಬಿಡುಗಡೆಯಾಗಿದೆ. ಹಳ್ಳಿಗಳಲ್ಲಿ ಕನ್ನಡದ ಬಗ್ಗೆ ಒಲವು ಹೊಂದಿರುವ ಯುವಕರು ಹಾಗೂ ಹಿರಿಯರು ದೊಡ್ಡ ಪ್ರಮಾಣದಲ್ಲಿದ್ದಾರೆ. ಇವುರುಗಳನ್ನು ಗುರುತಿಸಿ ಸೂಕ್ತವಾದ ಅವಕಾಶಗಳನ್ನು ಒದಗಿಸಲಾಗುವುದು ಎಂದರು.
ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ಮಾತನಾಡಿ, ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಪ್ರತಿ ಹೋಬಳಿ ಮತ್ತು ಹಳ್ಳಿಗಳಲ್ಲಿ ಅಸ್ತಿತ್ವ ಹೊಂದಿದೆ. ಘಟಕಗಳಲ್ಲಿ ಜವಾಬ್ದಾರಿ ಹೊಂದಿರುವವರು ಕೇವಲ ನಾಮಕಾವಸ್ತೆಗೆ ಹುದ್ದೆ ಹೊಂದಬಾರದು. ತಿಂಗಳಿಗೆ ಕನಿಷ್ಟ ಒಂದು ಕಾರ್ಯಕ್ರಮವನ್ನಾಗಿ ಆಯೋಜಿಸಬೇಕು. ಕಲೆ,ಸಾಹಿತ್ಯ, ಸಂಸ್ಕøತಿಯ ಬಗ್ಗೆ ಜನರಲ್ಲಿ ಆಸಕ್ತಿ ಉಂಟು ಮಾಡಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಹೆಚ್ಚು ಸಂಖ್ಯೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹೆಗ್ಗೆರೆ ಗ್ರಾಮದ ಟಿ.ಆರ್.ಅವಿನಾಶ್ ರಚಿಸಿರುವ ತತ್ವ ಸಾರುವ ಪೈರು ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ತಾಲ್ಲೂಕು ಅಧ್ಯಕ್ಷರಾದ ರಾಮಲಿಂಗಶೆಟ್ಟಿಯವರಿಗೆ ತುರುವನೂರು ಹೋಬಳಿಯ ನೂತನ ಅಧ್ಯಕ್ಷರಾದ ಎ.ಬಸಣ್ಣನವರಿಗೆ ಪರಿಷತ್ತಿನ ಬಾವುಟ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಸಾಪ ಪದಾಧಿಕಾರಿಗಳಾದ ವೆಂಕಟೇಶ್, ಎಂ.ವಿಶ್ವನಾಥ್, ತಿಪ್ಪೇಸ್ವಾಮಿ ಮತ್ತಿತರರಿದ್ದರು.