ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿ ಹಾಗೂ ಎ.ಐ.ಟಿ.ಯು.ಸಿ. ವತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‍ಗೆ ಮನವಿ ಸಲ್ಲಿಸಲಾಯಿತು.
ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಚೇರಿಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ವೇತನ ಹೆಚ್ಚಿಸದ ಸರ್ಕಾರಕ್ಕೆ ಧಿಕ್ಕಾರಗಳನ್ನು ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಕಳಪೆ ಗುಣಮಟ್ಟದ ಮೊಬೈಲ್‍ಗಳು ಹಾಳಾಗಿದ್ದು, ಕೂಡಲೆ ರಾಜ್ಯ ಸರ್ಕಾರ ಹಿಂದಕ್ಕೆ ಪಡೆದು ಹೊಸ ಮೊಬೈಲ್‍ಗಳನ್ನು ನೀಡಬೇಕು. ಮಾಸಿಕ ಹನ್ನೆರಡುವರೆ ಸಾವಿರ ರೂ.ಗಳ ಗೌರವಧನ ಪಡೆದು ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ಹದಿನೈದು ಸಾವಿರ ರೂ.ವೇತನ ನಿಗಧಿಪಡಿಸಿ ನಿವೃತ್ತಿಯಾದವರಿಗೆ ಎರಡು ಲಕ್ಷ ರೂ.ಗಳ ಹಿಡಿಗಂಟು ಕೊಟ್ಟು ಮಾಸಿಕ ಐದು ಸಾವಿರ ರೂ.ಗಳ ಪಿಂಚಣಿ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು.
ಎ.ಐ.ಟಿ.ಯು.ಸಿ. ಜಿಲ್ಲಾ ಗೌರವಾಧ್ಯಕ್ಷ ಕಾಂ.ಸಿ.ವೈ.ಶಿವರುದ್ರಪ್ಪ ಮಾತನಾಡುತ್ತ ಆರೋಗ್ಯ ಇಲಾಖೆಯ ಸಮೀಕ್ಷೆಯೂ ಸೇರಿದಂತೆ ಬೇರೆ ಇಲಾಖೆಯ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಿರುವ ಮೊಟ್ಟೆ ಟೆಂಡರ್‍ನ ಪರಿಣಾಮ ಕಳಪೆ ಮತ್ತು ಚಿಕ್ಕ ಗಾತ್ರದಿಂದ ಕೂಡಿದೆ. ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದರಿಂದ ಮೊಟ್ಟೆ ಖರೀಧಿಯ ಜವಾಬ್ದಾರಿಯನ್ನು ಬಾಲವಿಕಾಸ ಸಮಿತಿಗೆ ವಹಿಸಬೇಕು. ಬಹುತೇಕ ಜಿಲ್ಲೆಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಬಾಕಿ ಉಳಿದಿರುವ ಎಂಟು ತಿಂಗಳ ಬಾಡಿಗೆ ಹಣವನ್ನು ಸರ್ಕಾರ ಕೂಡಲೆ ಬಿಡುಗಡೆಗೊಳಿಸಬೇಕು. ದೀರ್ಘ ಕಾಲ ಒಂದೆ ಕಡೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮೇಲ್ವಿಚಾರಕಿಯರು ಸೇರಿದಂತೆ ಎಲ್ಲಾ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸುವಂತೆ ಒತ್ತಾಯಿಸಿದರು.
ಎ.ಐ.ಟಿ.ಯು.ಸಿ. ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಕಾಂ. ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ಲಕ್ಷ ರೂ.ಗಳ ಹಿಡಿಗಂಟು ನೀಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಕ್ರಮವಾಗಿ ಗೌರವಧನವನ್ನು ಹದಿನೈದು ಸಾವಿರ ಮತ್ತು ಹತ್ತು ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಎ.ಐ.ಟಿ.ಯು.ಸಿ. ತಾಲ್ಲೂಕು ಅಧ್ಯಕ್ಷ ಕಾಂ.ಬಿ.ಬಸವರಾಜಪ್ಪ, ರಾಜ್ಯ ಉಪಾಧ್ಯಕ್ಷ ಕಾಂ.ಟಿ.ಆರ್.ಉಮಾಪತಿ, ಸಂಘಟನಾ ಕಾರ್ಯದರ್ಶಿ ಕಾಂ.ಕೆ.ಇ.ಸತ್ಯಕೀರ್ತಿ, ಮೊಳಕಾಲ್ಮುರು ತಾಲ್ಲೂಕು ಅಧ್ಯಕ್ಷ ಕಾಂ.ಜಾಫರ್ ಷರೀಫ್, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಕಾಂ. ಎನ್.ಸಿ.ಕುಮಾರಸ್ವಾಮಿ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷೆ ಕಾಂ.ಅಮಿನಾಭಿ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಕಾಂ. ಎಸ್.ಸಿ.ಕುಮಾರ್, ತಾಲ್ಲೂಕು ಸಹ ಕಾರ್ಯದರ್ಶಿ ಕಾಂ.ಎಂ.ಬಿ.ಜಯದೇವಮೂರ್ತಿ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಅಧ್ಯಕ್ಷೆ ಕಾಂ. ಭಾಗ್ಯಮ್ಮ, ಜಿಲ್ಲಾ ಉಪಾಧ್ಯಕ್ಷೆ ಕಾಂ.ಜಮುನಾಬಾಯಿ, ಕಾಂ.ವಿನೋದಮ್ಮ, ಕಾಂ.ಸಾವಿತ್ರಮ್ಮ, ಕಾಂ.ರಾಧಮ್ಮ, ಕಾಂ.ರತ್ನಮ್ಮ, ಕಾಂ.ಮಂಜುಳಮ್ಮ ಸೇರಿದಂತೆ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.